‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ (Satya Son of Harishchandra) ಸಿನಿಮಾದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ ತಾಣಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ವಿಶೇಷವೆಂದರೆ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರು ಈ ಚಿತ್ರದಲ್ಲಿ ಅತ್ಯಂತ ಮಹತ್ವದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ದೊಡ್ಡ ಶಕ್ತಿ ತುಂಬಿದ್ದಾರೆ. ಅಲ್ಲದೆ, ಟೀಸರ್ಗೆ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. “ರಾಜಾ ಹರಿಶ್ಚಂದ್ರ ಕಾಲದಿಂದಲೂ ಈ ಹೆಸರಿಗೆ ಒಂದು ದೊಡ್ಡ ಗೌರವ ಮತ್ತು ತೂಕವಿದೆ. ಕಥೆ ಕೇಳಿದ ತಕ್ಷಣ ನನಗೆ ತುಂಬಾ ಇಷ್ಟವಾಯಿತು. ‘ರಂಗಿತರಂಗ’ ನಂತರ ಮತ್ತೆ ನಿರೂಪ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಹರಿಶ್ಚಂದ್ರ, ನಾನು ಸತ್ಯವನ್ನೇ ಹೇಳುತ್ತೇನೆ, ಇದು ನಿಜಕ್ಕೂ ಅತ್ಯುತ್ತಮವಾದ, ಭಾವನಾತ್ಮಕವಾದ ಸಿನಿಮಾ” ಎಂದರು. ಇದೇ ವೇಳೆ ಶಿವಣ್ಣ ಅವರ ಎಂಟ್ರಿ ಕುರಿತು ಮೆಲುಕು ಹಾಕಿದ ಸಾಯಿಕುಮಾರ್, “ಶಿವಣ್ಣನನ್ನು ಭೇಟಿಯಾದಾಗ ಈ ಕಥೆ ಹಾಗೂ ಪಾತ್ರದ ಬಗ್ಗೆ ಪ್ರಸ್ತಾಪಿಸಿದೆ. ಅವರು ತಕ್ಷಣವೇ ನಿರೂಪ್ಗೆ ಕರೆ ಮಾಡಲು ಹೇಳಿ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಾತ್ರ ಮಾಡಲು ಒಪ್ಪಿಕೊಂಡರು. ಅವರ ಉಪಸ್ಥಿತಿ ಸಿನಿಮಾಗೆ ಬಹುದೊಡ್ಡ ಬಲ ತಂದಿದೆ” ಎಂದು ಶಿವಣ್ಣನ ಸರಳತೆಯನ್ನು ಕೊಂಡಾಡಿದರು. ಇದನ್ನೂ ಓದಿ: ನಾನ್ ಪ್ರೂವ್ ಮಾಡೋಕೆ ರೆಡಿ, ಅವ್ರೂ ಬಂದು ಪ್ರೂವ್ ಮಾಡಲಿ – ವಿಜಯಲಕ್ಷ್ಮಿಗೆ ಧನ್ವೀರ್ ಓಪನ್ ಚಾಲೆಂಜ್

ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, “ಈ ಸಿನಿಮಾಗಾಗಿ ನನ್ನ ಜೀವನದ ಎರಡು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನಿರ್ದೇಶಕ ಸಚಿನ್ ಕಥೆ ಹೇಳಿದಾಗ ಇಷ್ಟವಾಯಿತು, ನಾವಿಬ್ಬರೂ ಜೊತೆಯಾಗಿ ಕುಳಿತು ಎರಡು-ಮೂರು ತಿಂಗಳು ಲ್ಯಾಪ್ಟಾಪ್ನಲ್ಲೇ ಸಂಪೂರ್ಣ ಚಿತ್ರಕಥೆಯನ್ನು ಹೊಸದಾಗಿ ತಿದ್ದಿ ತೀಡಿದೆವು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್ ಸರ್ ಸೂಕ್ತ ಎಂದು ನಮ್ಮ ತಂದೆ ಸೂಚಿಸಿದರು. ಇನ್ನು ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಮಯದಲ್ಲೂ ಅವರು ತೋರಿದ ಬದ್ಧತೆ, ಉತ್ಸಾಹ ಅದ್ಭುತ. ಶಾಟ್ಗೆ ಕರೆದ ತಕ್ಷಣ ಓಡೋಡಿ ಬಂದು ನಟಿಸುತ್ತಿದ್ದರು, ಡೈಲಾಗ್ಗಳನ್ನು ಮೊದಲೇ ಕಂಠಪಾಠ ಮಾಡಿಕೊಂಡು ತಯಾರಾಗಿದ್ದರು. ಅದಕ್ಕಾಗಿಯೇ ಅವರು ನಿಜವಾದ ಸೂಪರ್ಸ್ಟಾರ್. ಪುಣೆಯಿಂದ ಬಂದು ಕನ್ನಡದಲ್ಲೇ ಮೊದಲ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಅಂಕಿತ್ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ತಿಳಿಸಿದರು.
ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬೃಂದಾ ಆಚಾರ್ಯ ಮಾತನಾಡಿ, “ಸಾಯಿಕುಮಾರ್ ಸರ್ ಅವರಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದೇ ಒಂದು ಸೌಭಾಗ್ಯ. ಪರಭಾಷೆಯಿಂದ ಬಂದರೂ ಕನ್ನಡ ಸಿನಿಮಾಗೆ ಜೀವ ತುಂಬುತ್ತಿರುವ ನಿರ್ಮಾಪಕರಿಗೆ ಧನ್ಯವಾದಗಳು. ಹೆದರಿಕೆ ಮತ್ತು ಜವಾಬ್ದಾರಿಯ ನಡುವೆ ಒಂದು ಸಂಪೂರ್ಣ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುತ್ತಿದ್ದೇವೆ. ಭಾವನಾತ್ಮಕ ಅಂಶಗಳ ಜೊತೆಗೆ ಸಾಯಿಕುಮಾರ್ ಮತ್ತು ಶಿವಣ್ಣ ಸರ್ ಅವರ ನಟನೆಯಿಂದಾಗಿ ಸಿನಿಮಾ ಭರ್ಜರಿ ಮಾಸ್ ಆಗಿಯೂ ಮೂಡಿಬಂದಿದೆ” ಎಂದರು.
ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಮಾತನಾಡುತ್ತಾ, “ಚಿತ್ರದಲ್ಲಿ ನಾನು ಪತ್ರಕರ್ತೆಯಾಗಿ ‘ಗಾನ’ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಆ ಪಾತ್ರದಲ್ಲಿ ಒಂದು ಶಿಸ್ತು ಮತ್ತು ಪ್ರಾಮಾಣಿಕತೆ ಇತ್ತು. ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲದೆ ತಂದೆ-ತಾಯಂದಿರ ಮೇಲಿನ ಪ್ರೀತಿ ಮತ್ತು ಸಂಸ್ಕಾರದ ಮಹತ್ವವನ್ನು ಸಾರುತ್ತದೆ. ಚಿತ್ರೀಕರಣದ ವೇಳೆ ಸಾಯಿಕುಮಾರ್ ಅವರ 50 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮವನ್ನು ಕೇಕ್ ಕತ್ತರಿಸಿ ಆಚರಿಸಿದೆವು. ಅಷ್ಟು ದೊಡ್ಡ ನಟರಾಗಿದ್ದರೂ ‘ನನಗೆ ಸ್ವರ ಕೊಟ್ಟಿದ್ದು ತಂದೆ, ಸಂಸ್ಕಾರ ನೀಡಿದ್ದು ತಾಯಿ’ ಎಂದು ಹೇಳುವ ಅವರ ವಿನಮ್ರತೆ ನಮ್ಮೆಲ್ಲರಿಗೂ ಆದರ್ಶ” ಎಂದು ತಮ್ಮ ಅನುಭವ ಹಂಚಿಕೊಂಡರು.
ವಿಶೇಷವೆಂದರೆ ನಟ ನಿರೂಪ್ ಭಂಡಾರಿ ಅವರೇ ಚಿತ್ರಕಥೆ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸಚಿನ್ ವಾಲಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್, ಅಶ್ವಿನ್ ಹಾಸನ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ನಟಿಸಿದೆ. ಇದನ್ನೂ ಓದಿ: ವಿಜಯಲಕ್ಷ್ಮಿ Vs ಧನ್ವೀರ್ – ದರ್ಶನ್ಗೆ ಶುರುವಾಯ್ತಾ ಹೊಸ ಸಂಕಷ್ಟ?
