ಬಳ್ಳಾರಿ: ನಗರದಲ್ಲಿ (Bellary) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ GST ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಯುವಕನೊಬ್ಬನ ಹೆಸರನ್ನು ದುರ್ಬಳಕೆ ಮಾಡಿಕೊಂಡು 350 ಕೋಟಿ ರೂ. ವಂಚನೆ ಮಾಡಲಾಗಿದೆ. ಈ ಸಂಬಂಧ ಯುವಕನ ಕುಟುಂಬಸ್ಥರು ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ವಂಚನೆಯ (GST Fraud Case) ಮೊತ್ತವನ್ನ ಕಂಡು ಸ್ವತಃ ಬಳ್ಳಾರಿ ಸೈಬರ್ ಕ್ರೈಂ ಪೋಲಿಸರೇ ದಂಗಾಗಿ ಹೋಗಿದ್ದಾರೆ. ಕಂಪನಿಯೊಂದರಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡ್ತಿದ್ದ ಬಳ್ಳಾರಿಯ ರೋಷನ್ ಎಂಬ ಯುವಕನ ಹೆಸರಲ್ಲಿ ಖಾತೆ ಓಪನ್ ಮಾಡಿ ಬರೋಬ್ಬರಿ 350 ಕೋಟಿ ರೂ. GST ವ್ಯವಹಾರ ನಡೆಸಲಾಗಿದೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಕೇಸ್ – ಕೃತ್ಯದಲ್ಲಿ ಇಬ್ಬರು ಶಾಮೀಲು: ಈಶಾನ್ಯ ವಿಭಾಗ ಡಿಸಿಪಿ
ರೋಷನ್ ಕಂಪನಿಯೊಂದರಲ್ಲಿ ತಿಂಗಳಿಗೆ 15ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡಿಕೊಂಡಿದ್ದಾರೆ. ವಂಚಕರು ರೋಷನ್ ಅಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಬುಕ್ ಹಾಗೂ ಮನೆ ಕರೆಂಟ್ ಬಿಲ್ ಬಳಸಿ GST ಮಾಡಿಸಲಾಗಿದೆ. ಆದರೆ ಪೋನ್ ನಂಬರ್ ಹಾಗೂ ಮೇಲ್ ಐಡಿ ಬೇರೆ ಬೇರೆ ಇದೆ. ಹೀಗಾಗಿ ಯುವಕ ರೋಷನ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ವಂಚಕರು ರೋಷನ್ ಎಂಟರ್ ಪ್ರೈಸಸ್ ಹೆಸರಲ್ಲಿ ಐದು ತಿಂಗಳಲ್ಲಿ ಪ್ಲಾಸ್ಟಿಕ್ ವ್ಯಾಪಾರದ ಹೆಸರಲ್ಲಿ 350ಕೋಟಿ ರೂ. GST ವ್ಯವಹಾರ ಮಾಡಿ ಅಕೌಂಟ್ ಕ್ಲೋಸ್ ಮಾಡಿದ್ದಾರೆ. ನ.12 ರಂದು GST ಅಧಿಕಾರಿಗಳು ರೋಷನ್ ಮನೆಗೆ ಬಂದು ಯಾಕೆ ಅಕೌಂಟ್ ಕ್ಲೋಸ್ ಮಾಡಿದ್ದೀರಿ ಎಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಸಿ ಗೋಡೌನ್ನಲ್ಲಿ ಹಮಾಲಿ ಕೆಲಸಮಾಡುವ ತಂದೆ ಪಕೃದ್ದೀನ್, ತಾಯಿ ಸೇರಿದಂತೆ ಎಲ್ಲರೂ ಗಾಬರಿಯಾಗಿದ್ದಾರೆ.
ಕೆಲಸದಿಂದ ಬಂದ ರೋಷನ್ ವಿಷಯ ತಿಳಿದು ಕೂಡಲೇ GST ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಅಲ್ಲಿ ಸಮರ್ಪಕ ಉತ್ತರ ದೊರೆಯದೆ ಇಡೀ ಕುಟುಂಬವನ್ನ ಕರೆದುಕೊಂಡು ಸೈಬರ್ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದಿನಕ್ಕೆ ಹಮಾಲಿ ಮಾಡಿ 700ರೂ. ದುಡಿಯುವ ಪಕೃದ್ದೀನ್ ಮಗನ ಹೆಸರಲ್ಲಿ ನೂರಾರು ಕೋಟಿ ವ್ಯೆವಹಾರ ನಡೆದಿರುವದನ್ನ ಕೇಳಿ ಭಯದಿಂದ ಕಣ್ಣೀರು ಹಾಕಿದ್ದಾರೆ.
ಇತ್ತ ರೋಷನ್ ಕೂಡಾ ಭಯಗೊಂಡಿದ್ದು, ದಾಖಲೆಗಳನ್ನ ದುರುಪಯೋಗ ಮಾಡಿಕೊಂಡು ಅಕ್ರಮ ಹಣದ ವಹಿವಾಟು ಮಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ. ಸದ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಸೇತುವೆಯ ತಡೆಗೋಡೆಗೆ ಗುದ್ದಿ 20 ಅಡಿ ಕಂದಕಕ್ಕೆ ಬಿದ್ದ ಬಸ್ – ಮಹಿಳೆ ಸಾವು, 20 ಮಂದಿಗೆ ಗಾಯ
