ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಗರದ ಓರಾಯನ್ ಮಾಲ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ನೋಡಿದ್ದಾರೆ.
ಬೆಂಗಳೂರಿನ ಓರಾಯನ್ ಮಾಲ್ನಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಯಶ್ ಸ್ಕ್ರೀನ್ ಪ್ಲೇ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಹಳಷ್ಟು ಸಿನಿಮಾಗಳನ್ನ ನೋಡಿದ್ದೀನಿ ಈ ರೀತಿಯ ಚಿತ್ರಕಥೆ ಇದೇ ಮೊದಲು ಎಂದು ಯಶ್ ತಿಳಿಸಿದ್ದಾರೆ.
ಟಗರು ಹಾಡುಗಳು, ಮೇಕಿಂಗ್ ಎಲ್ಲವೂ ಕ್ಲಾಸ್ ಲೆವೆಲ್ನಲ್ಲಿದೆ. ಟಗರು ಸಿನಿಮಾ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಫಿಟ್ನೆಸ್ ಟ್ರೇನರ್ ಪಾನಿಪುರಿ ಕಿಟ್ಟಿ ಸೇರಿದಂತೆ ಹಲವರು ಯಶ್ಗೆ ಸಾಥ್ ಕೊಟ್ಟರು.
ಈ ಹಿಂದೆ ಕಿಚ್ಚ ಸುದೀಪ್ ಟಗರು ಸಿನಿಮಾ ನೋಡಿ ಚಿತ್ರವನ್ನು ತಮ್ಮದೇ ಸ್ಟೈಲ್ನಲ್ಲಿ ವಿಮರ್ಶಿಸಿದ್ದರು. ಟಗರು ಸಿನಿಮಾದ ನಿರೂಪಣೆ ತುಂಬಾ ವಿಶೇಷವಾಗಿದೆ ಹಾಗೂ ಚೆನ್ನಾಗಿದೆ. ತೆರೆ ಮೇಲೆ ಬರುವ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರನ್ನು ಕನ್ ಫ್ಯೂಸ್ ಮಾಡಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಕನ್ ಫ್ಯೂಸ್ ದೂರ ಮಾಡುವ ಪ್ರಯತ್ನ ಅದ್ಭುತವಾಗಿ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದರು.
ಅಷ್ಟೇ ಅಲ್ಲದೇ ಟಗರು ಚಿತ್ರ ವೀಕ್ಷಿಸಿದ ಸುದೀಪ್ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿ ತೋರಿಸಿದ ಚಿತ್ರದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಶುಭಾಶಯ ಎಂದು ಸುದೀಪ್ ಟಗರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೂಗಲ್ ಪ್ಲಸ್ ನಲ್ಲಿ ಬರೆದುಕೊಂಡಿದ್ದರು.
ಸದ್ಯ ಟಗರು ಚಿತ್ರ ಕರ್ನಾಟಕದಾದ್ಯಂತ ಯಶಸ್ವಿಗೊಂಡಿದ್ದು, ಈಗ ವಿದೇಶದಲ್ಲೂ ರಾರಾಜಿಸುತ್ತಿದೆ. ಯು.ಎಸ್.ಎಯ ಶಿಕಾಗೋ, ಫಿಲಡೆಲ್ಫಿಯ ಸೇರಿದಂತೆ 25ಕ್ಕೂ ಹೆಚ್ಚು ಕಡೆ ಸಿನಿಮಾ ಬಿಡುಗಡೆಯಾಗಿದೆ.