ಬಾಗಲಕೋಟೆ: ಇಳಕಲ್(Ilkal) ನಗರದ ರೈತರು ಹಾಗೂ ಸಾರ್ವಜನಿಕರು ಮಳೆರಾಯನನ್ನು (Rain) ಒಲಿಸಿಕೊಳ್ಳಲು ತಮ್ಮ ಸಾಂಪ್ರದಾಯಿಕ ಆಚರಣೆಯಾದ ಗುರ್ಜಿ ಉತ್ಸವದ(Gurji Ritua) ಮೊರೆ ಹೋಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾಗಲಕೋಟೆ(Bagalkote) ಜಿಲ್ಲೆಯ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಆದರೆ, ಜಿಲ್ಲಾದ್ಯಂತ ಮಾತ್ರ ಇನ್ನೂ ವರುಣದೇವನ ಕೃಪೆಯಾಗಿಲ್ಲ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯಾದ್ಯಂತ ಭೀಕರ ಬರಗಾಲದ ನೆರಳು ಆವರಿಸಿದೆ.
ಇಳಕಲ್ ನಗರದ ಐತಿಹಾಸಿಕ ಕಿಲ್ಲಾ ಓಣಿಯಲ್ಲಿ ಈ ವಿಶಿಷ್ಟ ಗುರ್ಜಿ ಆಚರಣೆ ಜರುಗಿತು. ಮಳೆಗಾಗಿ ಪ್ರಾರ್ಥಿಸುವ ಈ ವಿಶಿಷ್ಟ ಆಚರಣೆಯಲ್ಲಿ, ಕಾವಲಿ (ತವ) ಮೇಲೆ ಮಣ್ಣು ಹಾಕಿ, ಅದರೊಳಗೆ ಕಪ್ಪೆಯೊಂದನ್ನು ಇಟ್ಟು ಇಡೀ ಊರಿನಾದ್ಯಂತ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಾರ್ವಜನಿಕರು ಕಪ್ಪೆಯ ಮೇಲೆ ನೀರು ಹಾಕಿ ಮಳೆ ಬರಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ, ಗಂಡು ಮಕ್ಕಳು ಹೆಣ್ಣು ಮಕ್ಕಳಂತೆ ಸೀರೆ ಉಟ್ಟು, ವೇಷ ಧರಿಸಿ ಮನೆಮನೆಗೆ ತೆರಳಿ ರೊಟ್ಟಿ ಹಾಗೂ ಪಲ್ಯವನ್ನು ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಕಿಲ್ಲಾ ಹನುಮಂತ ದೇವರ ಗುಡಿಗೆ ತಂದು, ಸಾರ್ವಜನಿಕರೆಲ್ಲರೂ ಒಟ್ಟಾಗಿ ಸಾಮೂಹಿಕವಾಗಿ ಭೋಜನ ಸವಿದರು.
ಬರಗಾಲ ಬಂದಾಗ ಮಳೆರಾಯನನ್ನು ಬರಮಾಡಿಕೊಳ್ಳಲು ಉತ್ತರ ಕರ್ನಾಟಕ ಭಾಗದಲ್ಲಿ ಈ ಗುರ್ಜಿ ಆಚರಣೆ ಅತ್ಯಂತ ಪ್ರಸಿದ್ಧಿಯಾಗಿದೆ. ಈ ರೀತಿ ವಿಶಿಷ್ಟವಾಗಿ ಪೂಜೆ ಸಲ್ಲಿಸಿ, ಕಪ್ಪೆ ಮೆರವಣಿಗೆ ಮಾಡಿ ಪ್ರಾರ್ಥಿಸಿದರೆ ವರುಣದೇವನು ಕರುಣೆ ತೋರಿ, ಧರೆಗೆ ಮಳೆ ಸುರಿಸುತ್ತಾನೆ ಎಂಬುದು ಇಲ್ಲಿನ ರೈತರ ಗಾಢ ನಂಬಿಕೆಯಾಗಿದೆ.
