ಸುಮಾರು ನಾಲ್ಕೈದು ವರ್ಷಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇದೇ ಸಂದರ್ಭದಲ್ಲಿ ಬಹುಕಾಲದಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಮುಧೋಳ್’ (Mudhol) ಸಿನಿಮಾದ ಬಹುನಿರೀಕ್ಷಿತ ಅಪ್ಡೇಟ್ ಕೂಡ ಹೊರಬಿದ್ದಿದೆ.
‘ಮುಧೋಳ್’ ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದ್ದು, ಶೋಮ್ಯಾನ್ ನಿರ್ದೇಶಕ ಪ್ರೇಮ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಕಾರ್ತಿಕ್ ರಂಜನ್, ನಾಯಕಿ ಸಂಜನಾ ಆನಂದ್, ‘ಗುಚ್ಚಿ ಗರ್ಲ್’ ಹಾಡಿನ ನೃತ್ಯ ಕಲಾವಿದೆ ಇಷಿತಾ ರಾಜ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನಿರ್ದೇಶಕ ಪ್ರೇಮ್ ಅವರ ಮಾತು. ನನ್ನ ಬಾಸ್ ಮಗನ ಹಾಡನ್ನು ಬಿಡುಗಡೆ ಮಾಡುತ್ತಿರುವುದು ನನ್ನ ಪುಣ್ಯ ಎಂದು ಹೇಳಿದ ಪ್ರೇಮ್, ‘ಮುಧೋಳ್’ ಚಿತ್ರದ ಮುಂದಿನ ಎಲ್ಲಾ ಬೆಳವಣಿಗೆಗಳಲ್ಲೂ ಚಿತ್ರತಂಡದೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ರಂ ರವಿಚಂದ್ರನ್, ‘ಮುಧೋಳ್’ ಪಕ್ಕಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಓರಿಯೆಂಟೆಡ್ ಸಿನಿಮಾ ಎಂದು ಮಾಹಿತಿ ನೀಡಿದ್ದಾರೆ. ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ನಲ್ಲಿ ಸಂಜನಾ ಆನಂದ್ ಹಾಗೂ ಇಷಿತಾ ರಾಜ್ ನೃತ್ಯ ಮಾಡಿದ್ದು, ತಾವು ಕೂಡ ಹಾಡಿನಲ್ಲಿ ಒಂದೆರಡು ಸ್ಟೆಪ್ ಹಾಕಿರುವುದಾಗಿ ವಿಕ್ರಂ ತಿಳಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟಿ ಅನನ್ಯಾ ರಾಜ್ ನಿಧನ; ತಿಂಗಳ ನಂತರ ಬೆಳಕಿಗೆ ಬಂತು ಸಾವಿನ ಸುದ್ದಿ
ಇನ್ನು ಸಿನಿಮಾ ಇಷ್ಟು ವರ್ಷಗಳ ಕಾಲ ತಡವಾಗಿದ್ದಕ್ಕೆ ಕಾರಣವೇನು ಎಂಬ ಪ್ರಶ್ನೆಗೂ ವಿಕ್ರಂ ಉತ್ತರಿಸಿದ್ದಾರೆ. ನಿರ್ಮಾಪಕರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು, ಚಿತ್ರದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಹಾಗೂ ಕಥೆಯಲ್ಲಿ ಮಾಡಲಾದ ಕೆಲವು ಬದಲಾವಣೆಗಳಿಂದ ಸಿನಿಮಾ ತಡವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಧೋಳ್ ಸಿನಿಮಾದ ಹಿಂದೆ ತಂದೆ ರವಿಚಂದ್ರನ್ ಅವರ ಸಲಹೆಯೂ ಇದೆ ಎನ್ನುವುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲ, ಮುಧೋಳ್ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಿದ್ದೂ ರವಿಚಂದ್ರನ್ ಅವರೇ ಎಂದು ವಿಕ್ರಂ ರವಿಚಂದ್ರನ್ ತಿಳಿಸಿದ್ದಾರೆ.
ವಿಕ್ರಂ ಸ್ವತಃ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ಬ್ಯುಸಿನೆಸ್ ದೃಷ್ಟಿಕೋನವೂ ಮುಖ್ಯವಾಗಿದ್ದು, ನಿರ್ಮಾಪಕರಿಗೆ ತಮ್ಮ ಕೆಲಸದ ಮೂಲಕ ಬ್ಯುಸಿನೆಸ್ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಟೆಕ್ನಿಷಿಯನ್ ಹಾಗೂ ಕಲಾವಿದನಿಗೂ ಇರಬೇಕು ಎಂಬ ಅಭಿಪ್ರಾಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದ ಚಿತ್ರದ ಕೆಲಸಗಳು ನಿರೀಕ್ಷೆಗಿಂತ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿವೆ ಎಂದಿದ್ದಾರೆ. ಇದನ್ನೂ ಓದಿ: ಒಂದು ಸಿನಿಮಾಗೆ 50 ಕೋಟಿ ರೂ. ಸಂಭಾವನೆ ಕೇಳುತ್ತೀರಂತೆ? – ‘ಆಪ್ ಕಿ ಅದಾಲತ್’ನಲ್ಲಿ ಯಶ್ ಕೊಟ್ಟ ಉತ್ತರವೇನು?
‘ಮುಧೋಳ್’ ಚಿತ್ರದ ಮುಂದಿನ ಅಪ್ಡೇಟ್ಗಳು ಹಾಗೂ ಸಿನಿಮಾ ಬಿಡುಗಡೆಯ ದಿನಾಂಕದ ಕುರಿತು ಶೀಘ್ರದಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ. ಒಟ್ಟಿನಲ್ಲಿ, ಐದು ವರ್ಷಗಳ ಬಳಿಕ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿಕ್ರಂ ರವಿಚಂದ್ರನ್, ‘ಗುಚ್ಚಿ ಗರ್ಲ್’ ಹಾಡಿನ ಬಿಡುಗಡೆಯ ಮೂಲಕ ‘ಮುಧೋಳ್’ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
