ಲಡಕಿ ಸಿನಿಮಾ ರಿಲೀಸ್ ನಂತರ ರಾಮ್ ಗೋಪಾಲ್ ವರ್ಮಾ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿ ಅವರು ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಅದೂ ಕೋವಿಡ್ ಕುರಿತಾದ ಚಿತ್ರ ಎನ್ನುವುದು ವಿಶೇಷ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವರ್ಮಾ, ತಾವು ಕೋವಿಡ್ ಫೈಲ್ಸ್ ಹೆಸರಿನ ಸಿನಿಮಾವನ್ನು ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಕೋವಿಡ್ ವೈರಸ್ ಕುರಿತು ಹಲವಾರು ಸತ್ಯ ಮಿಥ್ಯೆಗಳಿವೆ. ಅದರಿಂದಾಗಿ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಸರಿಯಾದ ರೀತಿಯಲ್ಲಿ ಟ್ರೀಟ್ಮೆಂಟ್ ಸಿಗದೇ ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದಾರೆ. ಲಾಕ್ ಡೌನ್ ವೇಳೆಯಲ್ಲೂ ಹಲವು ರೀತಿ ಘಟನೆಗಳು ನಡೆದಿವೆ. ಸುಡಲು ಸ್ಮಶಾನವೂ ಸಿಗದೇ ಗೋಳಾಡಿದವರೂ ಇದ್ದಾರೆ. ಇವೆಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು ವರ್ಮಾ ಸಿನಿಮಾ ಮಾಡಲಿದ್ದಾರಂತೆ.ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್ ನಟನೆಯ ಹಾಲಿವುಡ್ ಚಿತ್ರತಂಡ
ಹಲವು ನೈಜ ಘಟನೆಗಳನ್ನು ಈ ಸಿನಿಮಾದಲ್ಲಿ ವರ್ಮಾ ತೋರಿಸಲಿದ್ದು, ದೇಶಾದ್ಯಂತ ನಡೆದ ಮನಕಲುಕುವ ಘಟನೆಗಳನ್ನೇ ಅವರು ಹೆಕ್ಕಿ ತಗೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ವರ್ಮಾ ಟೀಮ್ ಈ ಕುರಿತು ಕೆಲಸವನ್ನು ಆರಂಭಿಸಿದೆ ಅಂತೆ. ಶೀಘ್ರದಲ್ಲೇ ಒಂದಷ್ಟು ವಿಷಯಗಳನ್ನು ಅವರು ಬಹಿರಂಗ ಪಡಿಸಲಿದ್ದಾರಂತೆ. ಸದ್ಯ ಲಡಕಿ ಸಿನಿಮಾದ ಯಶಸ್ಸಿನಲ್ಲಿ ವರ್ಮಾ ತೇಲುತ್ತಿದ್ದು, ವಿಶ್ವದಾದ್ಯಂತ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗುತ್ತಿದೆ.