ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ ಮೂರು ರೈಲು ಅಪಘಾತದ (Odisha Train Tragedy) ತನಿಖೆ ಕೇಂದ್ರೀಯ ತನಿಖಾ ಸಂಸ್ಥೆ(CBI) ಹೆಗಲಿಗೆ ಬಿದ್ದಿದೆ.
ಒಡಿಶಾ ರೈಲು ಅಪಘಾತ ಸಂಬಂಧ ತನಿಖೆಯನ್ನು ಸಿಬಿಐ ತನಿಖೆಗೆ ರೈಲ್ವೇ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.
ದುರಂತ ನಡೆದ ಸ್ಥಳದಲ್ಲಿರುವ ಅಶ್ವಿನಿ ವೈಷ್ಣವ್, ಅಪಘಾತ ಹೇಗಾಯ್ತು?, ಆಡಳಿತವು ಹೊಂದಿರುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಮಂಡಳಿಯು ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಒಡಿಶಾ ರೈಲ್ವೇ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್
ಒಡಿಶಾ ಬಾಲಸೋರ್‌ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ 275 ಮಂದಿ ಮೃತಪಟ್ಟಿದ್ದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸಿಗ್ನಲಿಂಗ್‌ನಲ್ಲಿ ದೋಷ ಪತ್ತೆಯಾಗಿರುವುದು ತಿಳಿದು ಬಂದಿದೆ. ಗೂಡ್ಸ್ ರೈಲು ಹಳಿ ತಪ್ಪಿರಲಿಲ್ಲ. ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್ (Coromandel Express) ಬೋಗಿಗಳು ಇನ್ನೊಂದು ಮುಖ್ಯ ಹಳಿ ಮೇಲೆ ಬಿದ್ದ ಪರಿಣಾಮ ಗರಿಷ್ಠ ಮಟ್ಟದ ಸಾವು ನೋವು ಸಂಭವಿಸಿದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಬೋಗಿಗಳು ಗಂಟೆಗೆ 126 ಕಿ.ಮೀ ವೇಗದಲ್ಲಿ ಬರುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (Electronic Interlocking) ಸಮಯದಲ್ಲಿ ಉಂಟಾದ ಬದಲಾವಣೆಯಿಂದ ಅಪಘಾತ ಸಂಭವಿಸಿರುವುದು ತಿಳಿದು ಬಂದಿದೆ. ಈ ಬದಲಾವಣೆಯನ್ನು ಯಾರು ಮಾಡಿದ್ದಾರೆ ಮತ್ತು ಅದು ಹೇಗೆ ಸಂಭವಿಸಿತು ಎಂಬುದನ್ನು ಸರಿಯಾದ ತನಿಖೆಯ ನಂತರ ಕಂಡುಹಿಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.