ರಾಯಚೂರು: ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಕಪಗಲ್ ಗ್ರಾಮದ ಬಳಿ ರೈಲ್ವೇ ಟ್ರ್ಯಾಕ್ ನಿರ್ಮಾಣಕ್ಕಾಗಿ ಅಗೆದ ಗುಂಡಿಯಲ್ಲಿ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಭಾನುವಾರ ಶಾಲೆಗೆ ರಜೆ ಹಿನ್ನೆಲೆ ಪೋಷಕರೊಂದಿಗೆ ಜಮೀನಿಗೆ ಹೋಗಿದ್ದ ವೇಳೆ ಆಟವಾಡುತ್ತಾ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.
ಕಪಗಲ್ ಗ್ರಾಮದ 8 ವರ್ಷದ ಯಶವಂತ್ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಬಾಲಕ. ಗಿಣಿಗೇರಾ ಮೆಹಬೂಬನಗರ ರೈಲ್ವೇ ಟ್ರ್ಯಾಕ್ ನಿರ್ಮಾಣಕ್ಕೆ ಕೆಂಪು ಮಣ್ಣಿಗಾಗಿ ಅಗೆದಿದ್ದ ಗುಂಡಿಯನ್ನ ಹಾಗೆಯೇ ಬಿಡಲಾಗಿತ್ತು. ಇದನ್ನೂ ಓದಿ: ಪತಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಹಸುಗೂಸಿನ ಮುಂದೆಯೇ ನೇಣಿಗೆ ಕೊರಳೊಡ್ಡಿದ ಮಹಿಳೆ
ಮಳೆ ನೀರು ತುಂಬಿ ಸುಮಾರು ಹತ್ತು ಅಡಿ ಆಳದ ಗುಂಡಿ ಕೆರೆಯಂತಾಗಿತ್ತು. ಆಟವಾಡುತ್ತಾ ಬಂದು ಬಾಲಕ ಗುಂಡಿಗೆ ಬಿದ್ದಿದ್ದಾನೆ. ಕೆಲಸದಲ್ಲಿ ಮಗ್ನರಾಗಿದ್ದ ಪಾಲಕರಿಗೆ ಬಾಲಕ ನೀರಿನಲ್ಲಿ ಬಿದ್ದಿದ್ದು ತಿಳಿದಿಲ್ಲ. ಕೆಲ ಹೊತ್ತಿನ ನಂತರ ಮಗನಿಗಾಗಿ ಹುಡುಕಾಟ ನಡೆಸಿದ ವೇಳೆ ಪೋಷಕರಿಗೆ ಗುಂಡಿಯಲ್ಲಿ ಶವ ಸಿಕ್ಕಿದೆ.
ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ. ರೈಲ್ವೇ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ದ ಮೃತ ಬಾಲಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಂಶಯಾಸ್ಪದ ರೀತಿಯಲ್ಲಿ ಕಾಡಾನೆ ಸಾವು – ಅಮ್ಮನ ಬಳಿ ನಿಂತು ಮರಿ ಆನೆ ರೋಧನೆ
