– ಪ್ರವಾದಿ ಮುಹಮ್ಮದ್ ಕದನ ವಿಜಯಕ್ಕೂ, ‘ಬದ್ರ್ ಒಪ್ಪಂದ’ಕ್ಕೂ ಇರುವ ನಂಟೇನು?
ನ್ಯಾಟೋ ಮಾದರಿಯಲ್ಲಿ ಏಷ್ಯಾದಲ್ಲಿ ತನ್ನದೇ ಆಪ್ತ ದೇಶಗಳೊಟ್ಟಿಗೆ ಸೇರಿಕೊಂಡು ಪಾಕಿಸ್ತಾನ (Pakistan) ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿಗಳು ‘ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಸಹಿ ಹಾಕುವ ಮೂಲಕ ಒಂದು ಹೊಸ ರಕ್ಷಣಾ ಮೈತ್ರಿಕೂಟ ರೂಪುಗೊಂಡಿತು. ಇದಾಗಿ 2 ತಿಂಗಳು ಕಳೆಯುವಷ್ಟರಲ್ಲೇ ಟರ್ಕಿ, ಪಾಕಿಸ್ತಾನ, ಕತಾರ್ ಮತ್ತು ಇಂಡೋನೇಷ್ಯಾ ದೇಶಗಳು ಮಿಲಿಟರಿ ಸಹಕಾರವನ್ನು ಆಳಗೊಳಿಸಲು ಹಾಗೂ ತಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು ಹೊಸ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇದರೊಂದಿಗೆ ಮತ್ತೊಂದು ಇಸ್ಲಾಮಿಕ್ ರಕ್ಷಣಾ ಮೈತ್ರಿಕೂಟ ರಚನೆಯಾಗುವ ಸಾಧ್ಯತೆ ಕಂಡುಬರುತ್ತಿದೆ.
ಈ ನಾಲ್ಕು ರಾಷ್ಟ್ರಗಳು ಅಕ್ಟೋಬರ್ 21 ರಂದು ದೋಹಾದಲ್ಲಿ ‘ಬದ್ರ್ ತಿಳುವಳಿಕೆ ಒಪ್ಪಂದ’ (Badr Memorandum of Understanding) ಎಂಬ ಹೊಸ ಒಪ್ಪಂದಕ್ಕೆ ಸಹಿ ಹಾಕಿದವು. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಟರ್ಕಿಯ ರಕ್ಷಣಾ ಸಚಿವ ಯಾಸರ್ ಗುಲೆರ್, ಕತಾರ್ನ ಉಪ ಪ್ರಧಾನಿ ಹಾಗೂ ರಕ್ಷಣಾ ರಾಜ್ಯ ಸಚಿವ ಶೇಖ್ ಸೌದ್ ಬಿನ್ ಅಬ್ದುಲ್ ರೆಹಮಾನ್ ಮತ್ತು ಇಂಡೋನೇಷ್ಯಾದ ಉಪ ರಕ್ಷಣಾ ಸಚಿವ ಯೂಸುಫ್ ಜೌಹರಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ, ಈ ಒಪ್ಪಂದವು ಏನನ್ನು ಒಳಗೊಂಡಿದೆ? ಇದನ್ನು ಈಗಲೇ ಏಕೆ ಮಾಡಿಕೊಳ್ಳಲಾಗಿದೆ? ಎಲ್ಲಕ್ಕಿಂತ ಮುಖ್ಯವಾಗಿ, ಭಾರತಕ್ಕೆ (India) ಇದರ ಸಂದೇಶವೇನು ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ಏನಿದು ಮುಸ್ಲಿಂ ನ್ಯಾಟೋ? ಈಗ ಸಹಿ ಹಾಕಿದ್ದು ಯಾಕೆ? ಭಾರತಕ್ಕೆ ಆತಂಕ ಏನು?
ಸೌದಿ ಜೊತೆಗಿನ ಒಪ್ಪಂದದ ಕಥೆ ಏನು?
ಹೊಸ ಒಪ್ಪಂದಕ್ಕೂ ಮೊದಲು ಪಾಕಿಸ್ತಾನವು ಸೌದಿ ಅರೇಬಿಯಾ ಜೊತೆ ರಕ್ಷಣಾ ಮೈತ್ರಿ ಸಾಧಿಸಿತ್ತು. ಒಂದು ದೇಶದ ಮೇಲಿನ ದಾಳಿಯು ಮತ್ತೊಂದು ದೇಶದ ಮೇಲಿನ ದಾಳಿ ಎಂದು ಯೋಜನೆ ರೂಪಿಸಲಾಗಿತ್ತು. ಆದರೆ, ಇರಾನ್ ಮತ್ತು ಅಮೆರಿಕ ಯುದ್ಧ ಆರಂಭವಾದ ಬೆನ್ನಲ್ಲೇ ಸೌದಿಗೆ ಪಾಕ್ ಕೈಕೊಟ್ಟಿತು.
ಏನಿದು ಬದ್ರ್ ಒಪ್ಪಂದ?
ಇಸ್ಲಾಮಿಕ್ ಸಿದ್ಧಾಂತದ ನಾಲ್ಕು ರಾಷ್ಟ್ರಗಳು ಮಾಡಿಕೊಂಡಿರುವ ರಕ್ಷಣಾ ಒಪ್ಪಂದ ಇದಾಗಿದೆ. ಒಪ್ಪಂದದ ದೇಶಗಳು ಪರಸ್ಪರ ಮಿಲಿಟರಿ ಸಾಮರ್ಥ್ಯ ಬಲಪಡಿಸುವುದು, ರಕ್ಷಣಾ ಉತ್ಪಾದನೆ, ತರಬೇತಿ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಿಕೊಳ್ಳುವ ಒಪ್ಪಂದ ಇದಾಗಿದೆ.
ಯಾವ್ಯಾವ ರಾಷ್ಟ್ರಗಳ ನಡುವೆ ಒಪ್ಪಂದ?
ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ.
‘ಬದ್ರ್’ ಎಂದರೇನು?
ಹುಣ್ಣಿಮೆ ಅಥವಾ ಪೂರ್ಣಚಂದ್ರ.
ಬದ್ರ್ ಅಂತ ಹೆಸರಿಟ್ಟಿದ್ದೇಕೆ?
ಕ್ರಿ.ಶ.624ರಲ್ಲಿ ‘ಬದ್ರ್ ಕದನ’ ನಡೆದಿತ್ತು. ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಇಸ್ಲಾಂನ ಅತ್ಯಂತ ಆರಂಭಿಕ ಕದನಗಳಲ್ಲಿ ಇದು ಒಂದು. ಈ ಕದನದಲ್ಲಿ ಪ್ರವಾದಿ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ತಮ್ಮ ವಿರೋಧಿಗಳನ್ನು ಸೋಲಿಸಿದ್ದರು.
ಒಪ್ಪಂದದ ಉದ್ದೇಶ ಏನು?
‘ಬದ್ರ್ ತಿಳುವಳಿಕೆ ಒಪ್ಪಂದ’ವು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸಹಕಾರವನ್ನು ಬೆಳೆಸುವ, ನಾಲ್ಕು ದೇಶಗಳ ನಡುವೆ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಹಾಗೂ ತಾಂತ್ರಿಕ ರಕ್ಷಣಾ ತರಬೇತಿ ಮತ್ತು ಸಂಶೋಧನೆ, ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಆಧುನಿಕ ರಕ್ಷಣಾ ವ್ಯವಸ್ಥೆಗಳ ವಿಕಾಸಕ್ಕೆ ಪೂರಕವಾದ ಪರಿಹಾರಗಳು ಮತ್ತು ಕೈಗಾರಿಕೆಗಳನ್ನು ರೂಪಿಸಲು ಇದು ಕೊಡುಗೆ ನೀಡುತ್ತದೆ. ಇದನ್ನೂ ಓದಿ: ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ: ಇರಾನ್ಗೆ ಆಹ್ವಾನ, ಬಾಂಗ್ಲಾದೇಶವೂ ಸೇರ್ಪಡೆ?
ದೇಶಗಳ ಸಾಮರ್ಥ್ಯ ಏನು?
ನ್ಯಾಟೋ (NATO) ಒಕ್ಕೂಟದಲ್ಲಿ ಎರಡನೇ ಅತಿದೊಡ್ಡ ಸೇನಾ ಬಲವನ್ನು ಹೊಂದಿರುವ ಟರ್ಕಿ, ಬಲವಾದ ರಕ್ಷಣಾ ಉದ್ಯಮವನ್ನೂ ಹೊಂದಿದೆ. ಇಂತಹ ಒಪ್ಪಂದಕ್ಕೆ ಹಣಕಾಸಿನ ನೆರವು ನೀಡುವ ಸಾಮರ್ಥ್ಯ ಕತಾರ್ಗೆ ಇದ್ದರೆ, ಇಂಡೋನೇಷ್ಯಾವು ಜಂಟಿ ಅಭಿವೃದ್ಧಿ ಮತ್ತು ದೇಶೀಯ ಉತ್ಪಾದನೆಯಲ್ಲಿ ಅನುಭವವನ್ನು ಹೊಂದಿದೆ. ಪಾಕಿಸ್ತಾನವು ಉತ್ಪಾದನಾ ಸಾಮರ್ಥ್ಯದ ಜೊತೆಗೆ, ನುರಿತ ಮಾನವ ಸಂಪನ್ಮೂಲ ಮತ್ತು ಗಣನೀಯ ಪ್ರಮಾಣದ ದೇಶೀಯ ಮಾರುಕಟ್ಟೆಯನ್ನೂ ಹೊಂದಿದೆ.
ಒಪ್ಪಂದ ಹೇಗೆ ಕಾರ್ಯನಿರ್ವಹಿಸುತ್ತೆ?
ಈ ನಾಲ್ಕು ದೇಶಗಳು ತಮ್ಮ ರಾಷ್ಟ್ರೀಯ ಭದ್ರತಾ ಚೌಕಟ್ಟುಗಳ ವ್ಯಾಪ್ತಿಯಲ್ಲಿ ತಮ್ಮ ಅಗತ್ಯಗಳನ್ನು ಗುರುತಿಸಿಕೊಳ್ಳಲಿವೆ. ಇದರ ನಂತರ, ಒಂದು ಕಾರ್ಯನಿರ್ವಾಹಕ ಮಂಡಳಿಯು (Executive Board) ಜಂಟಿ ಉತ್ಪಾದನೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತದೆ. ಈ ಯೋಜನೆಗಳನ್ನು ನಂತರ ಒಂದು ವ್ಯೂಹಾತ್ಮಕ ಮಂಡಳಿಗೆ (Strategic Board) ಕಳುಹಿಸಲಾಗುತ್ತದೆ. ಈ ಮಂಡಳಿಯು ಬಜೆಟ್ಗಳು ಮತ್ತು ಉತ್ಪಾದನಾ ಸ್ಥಳಗಳ ಕುರಿತು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
ಈಗ ಬದ್ರ್ ಒಪ್ಪಂದ ಯಾಕೆ?
* ಅಮೆರಿಕ-ಇರಾನ್ ನಡುವಿನ ಯುದ್ಧವು ಎಂಟನೇ ತಿಂಗಳಿಗೆ ಕಾಲಿಟ್ಟಿದೆ.
* ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಸಂಘರ್ಷವು ಪ್ರಾದೇಶಿಕ ಭದ್ರತೆಯ ಬಗೆಗಿನ ಕಳವಳಗಳನ್ನು ಇನ್ನಷ್ಟು ಹೆಚ್ಚಿಸಿದೆ.
* ಅಮೆರಿಕದಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಇದೆ ಎಂಬ ವರದಿಗಳೂ ಇವೆ. ಇದು ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ, ತಮ್ಮ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವ ಒಪ್ಪಂದಗಳನ್ನು ಮಾಡಿಕೊಳ್ಳುವ ತುರ್ತು ಅಗತ್ಯದ ಭಾವನೆಯನ್ನು ಉಂಟುಮಾಡಿದೆ.
ಮಕ್ಕಾ ಒಪ್ಪಂದದಂತೆಯೇ ಇದೆಯೇ?
ಬದ್ರ್ ಒಪ್ಪಂದ ಮಕ್ಕಾ ಒಪ್ಪಂದಕ್ಕೆ ಭಿನ್ನವಾಗಿದೆ.
ಮಕ್ಕಾ ಒಪ್ಪಂದವೇನು?
ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ನಡುವೆ ಆಗಸ್ಟ್ನಲ್ಲಿ ಸಹಿ ಹಾಕಲಾದ ‘ಮೆಕ್ಕಾ ಒಪ್ಪಂದ’ದ ಪ್ರಕಾರ, ಈ ಮೂರು ದೇಶಗಳ ಪೈಕಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ, ಅದನ್ನು ಆ ಮೂರೂ ದೇಶಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ.
ಬದ್ರ್ ಒಪ್ಪಂದವೇನು?
ದೋಹಾದಲ್ಲಿ ಸಹಿ ಹಾಕಲಾದ ‘ಬದ್ರ್ ಒಪ್ಪಂದ’ವು ರಕ್ಷಣಾ ಸಹಕಾರದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದರ ನಿರ್ದಿಷ್ಟ ಉದ್ದೇಶಗಳಲ್ಲಿ ಜಂಟಿ ಉತ್ಪಾದನೆ, ಸಾಮರ್ಥ್ಯ ಅಭಿವೃದ್ಧಿ, ತರಬೇತಿ ಮತ್ತು ಸಂಶೋಧನೆಗಳು ಸೇರಿವೆ. ಇದನ್ನೂ ಓದಿ: ಕ್ಷಿಪಣಿ ದಾಳಿ; ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ, ಹಣಕಾಸು ವ್ಯವಹಾರ ಸ್ಥಗಿತಗೊಳಿಸಿದ ಯುಎಇ
ಭಾರತಕ್ಕೆ ಕಳವಳ ವಿಷಯವೇ?
ಇದು ಭಾರತಕ್ಕೆ ಮಹತ್ವದ ವಿಷಯವಾಗಿದೆ. ಏಕೆಂದರೆ ಇದು ಅಂತರರಾಷ್ಟ್ರೀಯ ಪಾಲುದಾರಿಕೆಗಳ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಬಲಪಡಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶಗಳನ್ನು ಕಲ್ಪಿಸುತ್ತದೆ. ಪ್ರಸ್ತುತ, ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರಗಳಿಗಾಗಿ ಚೀನಾವನ್ನು ಹೆಚ್ಚು ಅವಲಂಬಿಸಿದೆ. ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ’ (Operation Sindoor) ವೇಳೆ, ಚೀನಾದಲ್ಲಿ ತಯಾರಾದ ಅನೇಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಇವುಗಳಲ್ಲಿ HQ-9Pನಂತಹ ವಾಯು ರಕ್ಷಣಾ ವ್ಯವಸ್ಥೆಗಳು, J-10C ಮತ್ತು JF-17 ಯುದ್ಧ ವಿಮಾನಗಳು ಹಾಗೂ PL-15 ದೀರ್ಘ-ವ್ಯಾಪ್ತಿ ಏರ್-ಟು-ಏರ್ ಉಡಾಯಿಸುವ ಕ್ಷಿಪಣಿಗಳು ಸೇರಿವೆ. ಪಾಕಿಸ್ತಾನವು ತನ್ನ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ತಂತ್ರಜ್ಞಾನದ ಮೂಲಗಳನ್ನು ವೈವಿಧ್ಯಗೊಳಿಸಲು ಸಾಧ್ಯವಾಗುತ್ತದೆ. ಇಂತಹ ಸಹಕಾರವು, ತನ್ನ ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಮತ್ತು ದೇಶೀಯ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸಲು ಪಾಕ್ ನಡೆಸುತ್ತಿರುವ ಪ್ರಯತ್ನಗಳಿಗೆ ಬೆಂಬಲ ನೀಡಬಲ್ಲದು.
ಇಂಡೋನೇಷ್ಯಾ ಜೊತೆಗಿನ ಭಾರತದ ಒಪ್ಪಂದಕ್ಕೆ ಕಂಟಕ?
ಇಲ್ಲಿ ಇಂಡೋನೇಷ್ಯಾದ ಅಂಶವನ್ನೂ ಭಾರತ ಪರಿಗಣಿಸಬೇಕಿದೆ. ‘ಬದ್ರ್’ ಒಪ್ಪಂದದಿಂದಾಗಿ ಇಂಡೋನೇಷ್ಯಾ ಜೊತೆ ಭಾರತ ಮಾಡಿಕೊಂಡಿರುವ ರಕ್ಷಣಾ ಒಪ್ಪಂದವು ಅಪಾಯಕ್ಕೆ ಸಿಲುಕಲಿದೆಯೇ ಎಂಬ ಪ್ರಶ್ನೆಯಿದೆ. ಜುಲೈ ತಿಂಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾ 630 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವೊಂದನ್ನು ಘೋಷಿಸಿದ್ದವು. ಈ ಒಪ್ಪಂದದ ಅಡಿಯಲ್ಲಿ ಭಾರತವು ಇಂಡೋನೇಷ್ಯಾಗೆ ‘ಬ್ರಹ್ಮೋಸ್’ (BrahMos) ಕ್ರೂಸ್ ಕ್ಷಿಪಣಿಗಳು ಮತ್ತು ‘ಅಸ್ತ್ರ’ (Astra) ಏರ್-ಟು-ಏರ್ (Air-to-Air) ಕ್ಷಿಪಣಿಗಳನ್ನು ಪೂರೈಸಲಿದೆ. ‘ಬದ್ರ್’ ಒಪ್ಪಂದದ ಅಡಿಯಲ್ಲಿ, ಈ ನಾಲ್ಕು ದೇಶಗಳು ಭಾರತದ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಬಹುದು ಮತ್ತು ಇದರಿಂದ ಪಾಕಿಸ್ತಾನಕ್ಕೆ ಅನುಕೂಲವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಬದ್ರ್ ಒಪ್ಪಂದದ ಮೂಲಕ ಭಾರತದ ಕ್ಷಿಪಣಿ ತಂತ್ರಜ್ಞಾನದ ಮಾಹಿತಿ ಪಾಕಿಸ್ತಾನದ ಕೈ ಸೇರಬಹುದೇ ಎಂಬ ಆತಂಕಕ್ಕೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ಇಂಡೋನೇಷ್ಯಾ ಜೊತೆಗಿನ ಭಾರತದ ಒಪ್ಪಂದದಲ್ಲಿ ಕಠಿಣವಾದ ಡೇಟಾ ಪ್ರೊಟೆಕ್ಷನ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮಗಳಿವೆ. ಕೇವಲ ಬಳಕೆದಾರರ ಕೈಪಿಡಿಯನ್ನು ಹಂಚಿಕೊಳ್ಳಲಾಗುತ್ತದೆಯೇ ಹೊರತು ತಂತ್ರಜ್ಞಾನ ವರ್ಗಾವಣೆ ಇರುವುದಿಲ್ಲ. ಆದ್ದರಿಂದ ಭಾರತದ ತಂತ್ರಜ್ಞಾನ ಪ್ರತಿಸ್ಪರ್ಧಿಗಳ ಕೈ ಸೇರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಬದ್ರ್ ಒಪ್ಪಂದದ ಬೆಳವಣಿಗೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸಬೇಕಿದೆ.


