ಟೆಹ್ರಾನ್/ರಿಯಾದ್: ಅಮೆರಿಕದೊಂದಿಗೆ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳ ನಡುವೆ ಆಗಸ್ಟ್ 7 ರಂದು ಸಹಿ ಹಾಕಲಾದ ಮಹತ್ವದ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ(Mecca Joint Defence Agreement) ಸೇರ್ಪಡೆಗೊಳ್ಳುವಂತೆ ಇರಾನ್‌ಗೆ(Iran) ಅಧಿಕೃತ ಆಹ್ವಾನ ನೀಡಲಾಗಿದೆ.
ಟೆಹ್ರಾನ್‌ಗೆ ಈ ಆಹ್ವಾನ ಬಂದಿದ್ದು, ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ಸುದ್ದಿ ಸಂಸ್ಥೆಯ ಮುಖ್ಯಸ್ಥ ಮೆಹ್ದಿ ರಹೀಮಿ ತಿಳಿಸಿದ್ದಾರೆ ಎಂದು ಅಲ್ ಮಯಾದೀನ್ ವರದಿ ಮಾಡಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಶೀಘ್ರದಲ್ಲೇ ಟೆಹ್ರಾನ್‌ಗೆ ಭೇಟಿ ನೀಡಲಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ರಕ್ಷಣಾ ಒಕ್ಕೂಟದ ವಿಸ್ತರಣೆಯ ಚರ್ಚೆಗೆ ಹೆಚ್ಚಿನ ಪ್ರಾಮುಖ್ಯತೆ ತಂದಿದೆ.
ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಸಹಿ ಹಾಕಿರುವ ಈ ಒಪ್ಪಂದದ ಪ್ರಕಾರ, ಮೂರು ದೇಶಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೂ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ. ಈ ಐತಿಹಾಸಿಕ ಹೆಜ್ಜೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಏನಿದು ಮುಸ್ಲಿಂ ನ್ಯಾಟೋ? ಈಗ ಸಹಿ ಹಾಕಿದ್ದು ಯಾಕೆ? ಭಾರತಕ್ಕೆ ಆತಂಕ ಏನು?
ಏನಿದು ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ?
ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ(Saudi Arabia, Turkey, Pakistan) ದೇಶಗಳ ನಡುವೆ ಏರ್ಪಟ್ಟಿರುವ ಒಂದು ಐತಿಹಾಸಿಕ ತ್ರಿಪಕ್ಷೀಯ ಕಾರ್ಯತಂತ್ರದ ಮಿಲಿಟರಿ ಒಕ್ಕೂಟ. ಆಗಸ್ಟ್ 7 ರಂದು ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಅಲ್-ಸಫಾ ಅರಮನೆಯಲ್ಲಿ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಾಯಿತು. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಮತ್ತು ಯುದ್ಧದ ಸನ್ನಿವೇಶಗಳ ಹಿನ್ನೆಲೆಯಲ್ಲಿ ಈ ಮೂರು ಪ್ರಮುಖ ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿವೆ.
ಈ ಒಪ್ಪಂದದ ಪ್ರಮುಖ ತತ್ವವೆಂದರೆ ಮೈತ್ರಿಕೂಟದ ಮೂರು ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಹೊರಗಿನಿಂದ ಶಸ್ತ್ರಸಜ್ಜಿತ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇದು ಪಶ್ಚಿಮದ ನ್ಯಾಟೋ ಒಕ್ಕೂಟದ ‘ಆರ್ಟಿಕಲ್ 5’ ರಕ್ಷಣಾ ನೀತಿಯನ್ನು ಹೋಲುತ್ತದೆ. ಹೀಗಾಗಿಯೇ ಇದನ್ನು ಜಾಗತಿಕ ರಾಜಕೀಯದಲ್ಲಿ “ಮುಸ್ಲಿಮ್ ನ್ಯಾಟೋ” ಅಥವಾ “ಸುನ್ನಿ ಭದ್ರತಾ ಒಕ್ಕೂಟ” ಎಂದೂ ಕರೆಯಲಾಗುತ್ತಿದೆ.

