ಬಳ್ಳಾರಿ: ಪಬ್ಲಿಕ್ ಟಿವಿ(PUBLiC TV) ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ(Tekkalakote) ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿಯರ ಹಾಗೂ ನವಜಾತ ಶಿಶುಗಳ ವಾರ್ಡ್‌ಗೆ ಕೊನೆಗೂ ನೂತನ ಯುಪಿಎಸ್ (UPS) ಅಳವಡಿಸಿ ಬೆಳಕಿನ ಭಾಗ್ಯ ಕಲ್ಪಿಸಿದೆ.
ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ, ಬಾಣಂತಿಯರು ಹಾಗೂ ನವಜಾತ ಶಿಶುಗಳು ಗಾಳಿ ಮತ್ತು ಬೆಳಕಿಲ್ಲದೆ ತೀವ್ರ ಸಂಕಷ್ಟ ಎದುರಿಸಿದ್ದರು. ಆಸ್ಪತ್ರೆಯಲ್ಲಿ ಜನರೇಟರ್ ಹಾಗೂ ಯುಪಿಎಸ್ ಇದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದರೇ ವಿನಃ, ವಾಸ್ತವದಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಾಣಂತಿಯರು ಇಡೀ ರಾತ್ರಿ ಕಳೆಯುವಂತಾಗಿತ್ತು. ಇದನ್ನೂ ಓದಿ: SIR Row | ರಾಹುಲ್ ಗಾಂಧಿ ಭೇಟಿಗೆ ಅನುಮತಿ ನಿರಾಕರಿಸಿದ ಸಿಜೆಐ ಸೂರ್ಯಕಾಂತ್

ಸೆಕೆ ಹಾಗೂ ಗಾಳಿಯಿಲ್ಲದೆ ಕಂದಮ್ಮಗಳು ಆಕ್ರಂದನ ಮುಗಿಲುಮುಟ್ಟಿದ್ದು, ತಾಯಂದಿರು ತಮ್ಮ ಸೀರೆಯ ಸೆರಗಿನಿಂದಲೇ ಮಕ್ಕಳಿಗೆ ಗಾಳಿ ಬೀಸುತ್ತಾ ನರಕಯಾತನೆ ಅನುಭವಿಸಿದ್ದರು. ಅಧಿಕಾರಿಗಳ ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ವಿರುದ್ಧ ರೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿಶಾಪ ಹಾಕಿದ್ದರು.
ಆಸ್ಪತ್ರೆಯ ದುಸ್ಥಿತಿ ಹಾಗೂ ನವಜಾತ ಶಿಶುಗಳ ಕರುಣಾಜನಕ ಸ್ಥಿತಿಯ ನೈಜ ಚಿತ್ರಣವನ್ನು ಪಬ್ಲಿಕ್ ಟಿವಿ ವಿಸ್ತೃತವಾಗಿ ಪ್ರಸಾರ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ತಕ್ಷಣವೇ ಕ್ರಮ ಕೈಗೊಂಡು ಬಾಣಂತಿಯರ ವಾರ್ಡ್‌ಗೆ ಪ್ರತ್ಯೇಕ ನೂತನ ಯುಪಿಎಸ್(UPS) ಅಳವಡಿಸಿದ್ದಾರೆ.
ಪಬ್ಲಿಕ್ ಟಿವಿ ವರದಿಯ ಫಲವಾಗಿ ವಾರ್ಡ್‌ಗೆ ವಿದ್ಯುತ್ ಮರಳಿ ಬಂದಿದ್ದು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

