ಮಂಡ್ಯ: ಕಾವೇರಿ ಕೊಳ್ಳದ ರೈತರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಶಾಕಿಂಗ್ ಆದೇಶ ನೀಡಿದ್ದು, ಮತ್ತೆ ತಮಿಳುನಾಡಿಗೆ (Tamilnadu) ನಿತ್ಯ ನೀರು ಹರಿಸಲು ತಾಕೀತು ಮಾಡಿದೆ. ಇದರಿಂದ ರೊಚ್ಚಿಗೆದ್ದಿರುವ ಮಂಡ್ಯದ ರೈತ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಇಂದಿನಿಂದ (ಆ.25) ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಕಾವೇರಿ ಜಲ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೊಂದು ಕಹಿ ಸುದ್ದಿ ಬಂದಿದೆ. CWRC ಸಮಿತಿಯು ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 9 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಂದರೆ ಬರೋಬ್ಬರಿ 11.664 ಟಿಎಂಸಿ ನೀರನ್ನು ರಾಜ್ಯವು ತಮಿಳುನಾಡಿಗೆ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯದಲ್ಲಿ ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ನೀರಿನ ಅಭಾವ ಇರುವಾಗಲೇ ಬಂದಿರುವ ಈ ತೀರ್ಪು ಮಂಡ್ಯ ಭಾಗದ ರೈತರ ಕಣ್ಣೀರಿಗೆ ಕಾರಣವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ವರುಣನ ಅಬ್ಬರ – ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
CWRC ಈ ಆದೇಶ ನೀಡುತ್ತಿದ್ದಂತೆ ಸಕ್ಕರೆ ನಾಡು ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿದೆ. ಇಂದು ಬೆಳಗ್ಗೆಯಿಂದಲೇ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ಹೊರಹಾಕಲಿದ್ದಾರೆ. ಇತ್ತ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಹಾಗೂ ರೈತರು ಕಾವೇರಿ ನದಿಗಿಳಿದು ಜಲ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಮತ್ತೆ ಪ್ರತಿಭಟನೆಗೆ ಮುಂದಾದ ಸಿಜೆಪಿ – ಸರ್ಕಾರದ ಈಡೇರದ ಭರವಸೆಗಳ ವಿರುದ್ಧ ಸೆ.5ಕ್ಕೆ ಶಾಂತಿಯುತ ಮೆರವಣಿಗೆ

ಮತ್ತೊಂದೆಡೆ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಪ್ಲ್ಯಾನ್ ನಡೆದಿದೆ. ಮಧ್ಯಾಹ್ನ 12 ಗಂಟೆಗೆ ಹಲವು ಸಂಘಟನೆಗಳ ಮುಖಂಡರನ್ನು ಒಗ್ಗೂಡಿಸಿ ನೇರವಾಗಿ ಕೆಆರ್‌ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡಬಾರದು ಎಂದು ಆಗ್ರಹಿಸಿರುವ ಹೋರಾಟಗಾರರು, ಜಲಾಶಯದತ್ತ ಮುನ್ನುಗ್ಗಲು ಪ್ಲ್ಯಾನ್ ರೂಪಿಸಿದ್ದಾರೆ.
ಒಂದೆಡೆ CWRC ಆದೇಶ, ಇನ್ನೊಂದೆಡೆ ಭುಗಿಲೆದ್ದಿರುವ ಜನರ ಆಕ್ರೋಶ. ಮತ್ತೊಂದೆಡೆ ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಹೋರಾಟದ ಕಾವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಕೆಆರ್‌ಎಸ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.ಇದನ್ನೂ ಓದಿ: ಟಿಪ್ಪು ಕಟೌಟ್‌ಗೆ ಪಾಕ್ ಸೇನೆ ಹಾಡಿನ ರೀಲ್ಸ್ – ಯುವಕ ವಶಕ್ಕೆ
