– ತನಿಖೆ ಪೂರ್ಣಗೊಳ್ಳುವ ಮುನ್ನವೇ ಆರೋಪಗಳ ಸುರಿಮಳೆ
ಮಡಿಕೇರಿ: ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣ ಕುರಿತು ಸಿಸಿಬಿ ಪೊಲೀಸರು ನಡೆಸಿದ ತನಿಖೆಯಲ್ಲಿ ಅಮೆರಿಕ, ಕೆನಡಾ ಹಾಗೂ ಕಠ್ಮಂಡು ಮೂಲಕ ನಡೆದಿರುವ ಬೆಳವಣಿಗೆಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ (PM Narendraswamy) ಹೇಳಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಸಿಬಿ ತನಿಖೆಯಲ್ಲಿ ಅಮೆರಿಕ, ಕೆನಡಾ ಹಾಗೂ ಕಠ್ಮಂಡು ಮೂಲಕ ನಡೆದಿರುವ ಬೆಳವಣಿಗೆಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ವಿಡಿಯೋಗಳನ್ನ ಕೆನಡಾದಲ್ಲಿ ಅಪ್ಲೋಡ್ ಮಾಡಿದವರು ಯಾರು? ಅವರನ್ನು ಕಠ್ಮಂಡು ಮೂಲಕ ಭಾರತಕ್ಕೆ ಕರೆತಂದವರು ಯಾರು? ತನಿಖೆ ಆರಂಭವಾಗುತ್ತಿದ್ದಂತೆ ಸಿಸಿಬಿ ನೋಟಿಸ್ ನೀಡಿದ ಮೂವರು ಯಾಕೆ ವಿಚಾರಣೆಗೆ ಹಾಜರಾಗುತ್ತಿಲ್ಲ? ಅವರು ಯಾವ ಪಕ್ಷದವರು, ಯಾರ ಬೆಂಬಲಿಗರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಇನ್ನೂ ಪ್ರಕರಣದ ತನಿಖೆ ದೆಹಲಿಗೆ ತಲುಪಿರುವುದರ ಬಗ್ಗೆಯೂ ಪ್ರಶ್ನೆ ಎತ್ತಿರುವ ನರೇಂದ್ರಸ್ವಾಮಿ, ಯಾರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ತನಿಖೆಯೇ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆ, ಅನುದಾನ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ವೈಯಕ್ತಿಕ ಆರೋಪ ಮತ್ತು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಯುವಜನತೆಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬುದನ್ನ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಸ್ಥಾನಮಾನದ ಘನತೆ ಮತ್ತು ಗೌರವವನ್ನ ಕಾಪಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಿಂದ ಅಧಿಕಾರಕ್ಕೆ ಬಂದವರು ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳಬಾರದು ಎಂದಿದ್ದಾರೆ ಸಚಿವರು.
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಲು ಚಿಂತನೆ
ಮುಂದುವರಿದು ಮಾತನಾಡಿದ ನರೇಂದ್ರಸ್ವಾಮಿ ಅವರು, ಕನ್ನಡದ ಬಾವುಟ ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಕನ್ನಡ ಬಾವುಟದ ಮಾನ್ಯತೆ ವಿಚಾರವನ್ನ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ಸೇರಿದಂತೆ ರಾಜ್ಯದ ಎರಡೂ ಸದನಗಳಲ್ಲಿ ಒಕ್ಕೊರಲ ನಿರ್ಣಯ ಅಂಗೀಕರಿಸಿ, ಆ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಚಿಂತನೆ ಇದೆ ಎಂದಿದ್ದಾರೆ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬರಲಿದ್ದು, ಕನ್ನಡ ಬಾವುಟಕ್ಕೆ ಸಾಂವಿಧಾನಿಕ ಹಾಗೂ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದೆ ಎಂದು ತಿಳಿಸಿದ್ದಾರೆ.
ಎಸ್ಐಆರ್ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ
ಎಸ್ಐಆರ್ ಪ್ರಕ್ರಿಯೆ ಸರಿಯಾಗಿದೆಯೇ ಎಂಬುದು ನಮ್ಮ ಪ್ರಶ್ನೆ. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ನಮ್ಮ ಬಳಿ ದಾಖಲೆಗಳಿವೆ. ಹೀಗಾಗಿ ದಾಖಲೆ ಸಮೇತ ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ ಎಂದಿದ್ದರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ದಾಖಲೆಗಳನ್ನು ಮುಂದಿಟ್ಟುಕೊಂಡು ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಬಗ್ಗೆ ಆರೋಪ ಮಾಡಿದ್ದಾರೆ. 3-4 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಬಿ.ಆರ್. ಪಾಟೀಲ್ ಕೂಡ ಹೇಳಿಕೆ ನೀಡಿದ್ದಾರೆ. ಒಬ್ಬೊಬ್ಬರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಅನುಭವದ ಆಧಾರದ ಮೇಲೆ ಮಾತನಾಡಿರಬಹುದು. ಆದರೆ ರಾಜ್ಯವ್ಯಾಪಿ ವಿಚಾರವನ್ನ ಅವರು ಪ್ರಸ್ತಾಪಿಸಿರಲು ಸಾಧ್ಯವಿಲ್ಲ. ನಾವು ಸುಮ್ಮನೆ ಆರೋಪ ಮಾಡುತ್ತಿಲ್ಲ, ದಾಖಲೆಗಳ ಸಮೇತ ಹೋರಾಟ ಮಾಡುತ್ತಿದ್ದೇವೆ ಎಂದು ಸಚಿವ ನರೇಂದ್ರಸ್ವಾಮಿ ತಿಳಿಸಿದ್ದಾರೆ.


