ನವದೆಹಲಿ: ಅಮರನಾಥ ಯಾತ್ರೆ (Amarnath Yatra) ಆರಂಭವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದಾದ್ಯಂತ ಶಿವಭಕ್ತರಿಗೆ ವಿಶೇಷ ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಭಗವಾನ್ ಅಮರನಾಥರ ಕೃಪೆಯಿಂದ ಪ್ರತಿಯೊಬ್ಬ ಯಾತ್ರಿಕರ ಪಯಣ ಸುರಕ್ಷಿತ, ಸುಖಕರ ಹಾಗೂ ಮಂಗಳಕರವಾಗಿರಲಿ ಎಂದು ಹಾರೈಸಿದ್ದಾರೆ.
ಅಮರನಾಥ ಯಾತ್ರೆ ಕೇವಲ ಧಾರ್ಮಿಕ ಪ್ರವಾಸವಲ್ಲ, ಅದು ಭಕ್ತಿ. ಆತ್ಮಸಾಕ್ಷಾತ್ಕಾರ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಯಾತ್ರೆಯ ಯಶಸ್ವಿ ಆಯೋಜನೆಗಾಗಿ ಶ್ರಮಿಸುತ್ತಿರುವ ಭದ್ರತಾ ಪಡೆಗಳು, ಆಡಳಿತ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಯಂಸೇವಕರ ಸೇವೆಯನ್ನು ಅವರು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಆರಂಭ – ಬಿಗಿ ಭದ್ರತೆಯಲ್ಲಿ ಜಮ್ಮುವಿನಿಂದ ಹೊರಟ ಮೊದಲ ತಂಡ
ಇದೇ ಸಮಯದಲ್ಲಿ ಯಾತ್ರಿಕರು ಐದು ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಮೊದಲನೆಯದಾಗಿ, ಯಾತ್ರಾ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿ ಪರಿಸರವನ್ನು ಶುಚಿಯಾಗಿಡಬೇಕು. ಎರಡನೆಯದಾಗಿ, ಆಡಳಿತ ಹಾಗೂ ಭದ್ರತಾ ಪಡೆಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿ ಯಾತ್ರೆ ಕೈಗೊಳ್ಳಬೇಕು. ಮೂರನೆಯದಾಗಿ, ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿ ಯಾತ್ರೆಯ ವೆಚ್ಚದ ಕನಿಷ್ಠ ಶೇ.10ರಷ್ಟು ಮೊತ್ತವನ್ನು ಜಮ್ಮು-ಕಾಶ್ಮೀರದ ಸ್ಥಳೀಯ ಉತ್ಪನ್ನಗಳ ಖರೀದಿಗೆ ಮೀಸಲಿಟ್ಟು ಅಲ್ಲಿನ ಜನರ ಜೀವನೋಪಾಯಕ್ಕೆ ಬೆಂಬಲ ನೀಡಬೇಕು.
ನಾಲ್ಕನೆಯದಾಗಿ, ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನದಡಿ ಯಾತ್ರೆಯ ಬಳಿಕ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು. ಐದನೆಯದಾಗಿ, ‘ನೇಷನ್ ಫಸ್ಟ್’ ಸಂಕಲ್ಪದೊಂದಿಗೆ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ವಿಕಸಿತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಅಂಜನಾದ್ರಿಗೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭೇಟಿ – ಹನುಮನಿಗೆ ವಿಶೇಷ ಪೂಜೆ
