ಬೆಂಗಳೂರು: ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ (Ethanol) ಮಿಶ್ರಣ ಮಾಡುವುದು ಅಗತ್ಯ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್ ಹಾಳಾಗಬಹುದು ಎಂದು ಬೆಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಕೃಷ್ಣಮೂರ್ತಿ ಹೇಳಿದರು.
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಆರ್ಥಿಕವಾಗಿ ಅನುಕೂಲಕರ. ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ ಮಿಶ್ರಣ ಮಾಡುವುದು ಅಗತ್ಯ. ಸಾಮಾನ್ಯ ವಾಹನಗಳ ಎಂಜಿನ್ಗಳಿಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಸೂಕ್ತ. ಕೆಲವು ಮಾಡಿಫೈಡ್ ಎಂಜಿನ್ಗಳು ಶೇ.25ರಿಂದ 30ರಷ್ಟು ಎಥೆನಾಲ್ ಮಿಶ್ರಣ ಸಹಿಸಿಕೊಳ್ಳಬಹುದು. ವಾಹನಗಳ ಎಂಜಿನ್ ವಿನ್ಯಾಸಕ್ಕೆ ಅನುಗುಣವಾಗಿ ಎಥೆನಾಲ್ ಬಳಕೆ ಮಾಡಬೇಕು. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ನಲ್ಲಿ 31% ಎಥೆನಾಲ್ ಮಿಶ್ರಣ ಆರೋಪ – ಅಂಕಿಅಂಶ ಪ್ರಶ್ನಿಸಿದ ತೈಲ ಕಂಪನಿಗಳು
ಎಂಜಿನ್ಗೆ ಸೂಕ್ತವಲ್ಲದ ಎಥೆನಾಲ್ ಬಳಕೆಯಿಂದ ನಾಕಿಂಗ್ ಸಮಸ್ಯೆ ಉಂಟಾಗಬಹುದು. ಎಂಜಿನ್ನಲ್ಲಿ ಶಾಕ್ವೇವ್ ಉಂಟಾಗಿ ಸ್ಪಾರ್ಕ್ ಪ್ಲಗ್ ಮತ್ತು ಸಿಲಿಂಡರ್ ವಾಲ್ಟ್ಗಳ ಮೇಲೆ ಪರಿಣಾಮ ಬೀರಬಹುದು. ಎಥೆನಾಲ್ ಪ್ರಮಾಣ ಹೆಚ್ಚಾದರೆ ಎಂಜಿನ್ ಕಾರ್ಯಕ್ಷಮತೆ ಕುಸಿಯುವ ಸಾಧ್ಯತೆ ಇದೆ. ವಾಹನದ ಎಂಜಿನ್ ವಿನ್ಯಾಸಕ್ಕೆ ಹೊಂದುವ ಇಂಧನ ಬಳಕೆ ಮಾಡುವುದು ಉತ್ತಮ ಎಂದರು.
ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿಸಿದರೆ ವಾಹನಗಳ ಎಂಜಿನ್ ಅಪ್ಗ್ರೇಡ್ ಅಗತ್ಯ. ಎಥೆನಾಲ್ ಬಳಕೆಗೆ ಅನುಗುಣವಾಗಿ ಭಾರತೀಯ ವಾಹನಗಳ ಎಂಜಿನ್ಗಳನ್ನು ಮಾರ್ಪಡಿಸಬೇಕು. ಎಂಜಿನ್ನ ನಾಕಿಂಗ್ ರೆಸಿಸ್ಟೆನ್ಸ್ ಸಾಮರ್ಥ್ಯ ಹೆಚ್ಚಿಸುವುದು ಮುಖ್ಯ. ಆಕ್ಟೇನ್ ರೇಟಿಂಗ್ ಹೆಚ್ಚಿದಷ್ಟು ಎಂಜಿನ್ನಲ್ಲಿ ನಾಕಿಂಗ್ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಎಥೆನಾಲ್ ಮತ್ತು ಪೆಟ್ರೋಲ್ ಎರಡರಲ್ಲೂ ಕಾರ್ಬನ್ ಅಂಶವಿದೆ. ಸಂಪೂರ್ಣ ದಹನ ಪ್ರಕ್ರಿಯೆ ನಡೆದರೆ ಕಾರ್ಬನ್ ಮಾನಾಕ್ಸೈಡ್ ಹೊರಸೂಸುವಿಕೆ ನಿಯಂತ್ರಿಸಬಹುದು. ಆದರೆ, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಕಾರ್ಬನ್ ಎಮಿಷನ್ ಸಂಪೂರ್ಣವಾಗಿ ಕಡಿಮೆ ಮಾಡಲು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಬೇಕು ಎಂದು ವಿವರಿಸಿದರು.
ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ವೈ.ಶಿವರಾಜ್ ಮಾತನಾಡಿ, ಪೆಟ್ರೋಲ್, ಡೀಸೆಲ್ ಮತ್ತು ಕಲ್ಲಿದ್ದಲಿನಂತಹ ಇಂಧನಗಳ ಲಭ್ಯತೆ ಭವಿಷ್ಯದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ 30-40 ವರ್ಷಗಳಲ್ಲಿ ಪೆಟ್ರೋಲ್ ಕೊರತೆ ಎದುರಾಗುವ ಆತಂಕವಿದ್ದು, ಪರ್ಯಾಯ ಇಂಧನದ ಅನಿವಾರ್ಯತೆ ಎದುರಾಗಿದೆ. ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ಮಾಡುವ ಮೂಲಕ ಪರ್ಯಾಯ ಇಂಧನ ಬಳಕೆಗೆ ಸರ್ಕಾರ ಒತ್ತು ನೀಡುತ್ತಿದೆ. ಇ10 ಎಂದರೆ ಶೇ.10ರಷ್ಟು ಹಾಗೂ ಇ20 ಎಂದರೆ ಶೇ.20ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ಗೆ ಮಿಶ್ರಣ ಮಾಡುವುದು. ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಬಳಸಬೇಕಾದರೆ ವಾಹನಗಳ ಎಂಜಿನ್ ಮತ್ತು ಇಂಧನ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಅಗತ್ಯ ಎಂದು ತಿಳಿಸಿದರು. ಇದನ್ನೂ ಓದಿ: ಪೆಟ್ರೋಲ್ನಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಮಿಶ್ರಣ, ತೈಲ ಕಂಪನಿಗಳಿಗೆ ಲಾಭ: ರಿಜ್ವಾನ್ ಅರ್ಷದ್
ಕೆಲವು ವಿದೇಶಿ ದೇಶಗಳಲ್ಲಿ ವಿಶೇಷ ಎಂಜಿನ್ ವ್ಯವಸ್ಥೆಯೊಂದಿಗೆ ಶೇ.85 ರವರೆಗೂ ಎಥೆನಾಲ್ ಬಳಕೆಗೆ ಅವಕಾಶವಿದೆ. ಭಾರತೀಯ ವಾಹನಗಳಿಗೆ ಪ್ರಸ್ತುತ ಶೇ.20ರಷ್ಟು ಎಥೆನಾಲ್ ಮಿಶ್ರಣ ಸುರಕ್ಷಿತ ಮಿತಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಎಥೆನಾಲ್ ಬಳಕೆ ಹೆಚ್ಚಾದರೆ ವಾಹನಗಳ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ. ಎಥೆನಾಲ್ನಲ್ಲಿರುವ ಆಮ್ಲಜನಕದ ಅಂಶದಿಂದ ಇಂಧನ ಟ್ಯಾಂಕ್ ಮತ್ತು ಇತರ ಬಿಡಿಭಾಗಗಳಲ್ಲಿ ತುಕ್ಕು ಉಂಟಾಗಿ ಸೋರಿಕೆ, ಬಿರುಕು ಕಾಣಿಸಿಕೊಳ್ಳುವ ಅಪಾಯವಿದೆ. ಪೆಟ್ರೋಲ್ಗೆ ಹೋಲಿಸಿದರೆ ಎಥೆನಾಲ್ನ ಕ್ಯಾಲೊರಿಫಿಕ್ ವ್ಯಾಲ್ಯೂ ಕಡಿಮೆ ಇದೆ ಹೀಗಾಗಿ, ಇಂಧನ ದಕ್ಷತೆ ಮತ್ತು ಎಂಜಿನ್ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿದರು.
