ವಾಷಿಂಗ್ಟನ್: ವಿಶ್ವವಿಖ್ಯಾತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಕ್ಯಾಂಪಸ್‌ನಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಜಗತ್ತಿನ ಅತ್ಯಂತ ವಿಷಕಾರಿ ರಾಸಾಯನಿಕಗಳಲ್ಲಿ ಒಂದಾದ ಡೈಮಿಥೈಲ್ ಮರ್ಕ್ಯುರಿ (Dimethyl Mercury) ತಯಾರಿಸಿರುವುದಾಗಿ ಹೇಳಿಕೊಂಡಿದ್ದು, ಕ್ಯಾಂಪಸ್‌ನಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.
ಬುಧವಾರ ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ತೆರಳಿದ ವಿದ್ಯಾರ್ಥಿ, ತಾನು ಎಂಐಟಿ ಕ್ಯಾಂಪಸ್‌ನ ‘ಡ್ರೇಫಸ್ ಬಿಲ್ಡಿಂಗ್’ ಪ್ರಯೋಗಾಲಯದಲ್ಲಿ ಅತ್ಯಂತ ಅಪಾಯಕಾರಿ ಡೈಮಿಥೈಲ್ ಮರ್ಕ್ಯುರಿ ತಯಾರಿಸಿರುವುದಾಗಿ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾನೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ಕಟ್ಟಡವನ್ನು ತಕ್ಷಣವೇ ಮುಚ್ಚಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಡೈಮಿಥೈಲ್ ಮರ್ಕ್ಯುರಿಯನ್ನು ತಯಾರಿಸಲು ವಿದ್ಯಾರ್ಥಿಗೆ ಯಾವುದೇ ಅಧಿಕೃತ ಅನುಮತಿ ಇರಲಿಲ್ಲ ಮತ್ತು ಆತನ ಸಂಶೋಧನಾ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ ಎಂದು ಎಂಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿ ತಂಗಿದ್ದ ಹಾಸ್ಟೆಲ್ ಕೊಠಡಿಯನ್ನು ಸೀಲ್ ಮಾಡಲಾಗಿದ್ದು, ಕಟ್ಟಡದ ಸಾಮಾನ್ಯ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ಏನಿದು ಡೈಮಿಥೈಲ್ ಮರ್ಕ್ಯುರಿ?:
ಡೈಮಿಥೈಲ್ ಮರ್ಕ್ಯುರಿ ಅತ್ಯಂತ ತೀವ್ರ ಸ್ವರೂಪದ ವಿಷಕಾರಿ ರಾಸಾಯನಿಕ ಸಂಯುಕ್ತವಾಗಿದೆ. ಇದು ಚರ್ಮದ ಮೂಲಕ ನೇರವಾಗಿ ದೇಹಕ್ಕೆ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ದೇಹ ಸಂಪರ್ಕಕ್ಕೆ ಬಂದರೂ ತೀವ್ರ ವಿಷಕಾರಿ ಪರಿಣಾಮ ಬೀರಿ ಪ್ರಾಣಾಪಾಯ ಉಂಟುಮಾಡಬಹುದು. ಇದನ್ನೂ ಓದಿ: ನಿಜವಾದ ಶತ್ರುಗಳನ್ನು ಗುರುತಿಸಿ – ಮುಸ್ಲಿಂ ರಾಷ್ಟ್ರಗಳಿಗೆ ಮೊಜ್ತಬಾ ಖಮೇನಿ ಕರೆ
ಸದ್ಯ ವಿದ್ಯಾರ್ಥಿಯು ವೈದ್ಯಕೀಯ ನಿಗಾದಲ್ಲಿದ್ದು, ಆತನ ಪ್ರಾಥಮಿಕ ರಕ್ತ ಪರೀಕ್ಷಾ ವರದಿಯಲ್ಲಿ ಯಾವುದೇ ಪಾದರಸದ (Mercury) ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ ಎಂದು ಎಂಐಟಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿ ನಿಜವಾಗಿಯೂ ಈ ರಾಸಾಯನಿಕವನ್ನು ತಯಾರಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಇತರರಿಗೆ ಇದರಿಂದ ಯಾವುದೇ ಸೋಂಕು ಅಥವಾ ಅಪಾಯ ಹರಡುವ ಸಾಧ್ಯತೆ ತೀರಾ ಕಡಿಮೆ ಎಂದು ಸಂಸ್ಥೆ ತಿಳಿಸಿದೆ.
