ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಕೃತಿಯ ನಡುವಿನ ಸಮತೋಲನ ದಿನೇ ದಿನೇ ಕಡಿಮೆಯಾಗುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯ ಲಾಭಕ್ಕಾಗಿ ಕಾಡಿನ ಆನೆಗಳನ್ನು ಪಳಗಿಸಿ, ಪ್ರವಾಸಿಗರ ಮನೋರಂಜನೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಎಷ್ಟೇ ವರ್ಷಗಳ ಕಾಲ ಮನುಷ್ಯರ ನಡುವೆ ಬದುಕಿದರೂ ಆನೆಗಳ ಮೂಲ, ಸಹಜ ಗುಣವಾದ ‘ವನ್ಯಗುಣ’ ಮತ್ತು ಸ್ವಾಭಿಮಾನ ಎಂದಿಗೂ ಮಾಸುವುದಿಲ್ಲ ಎಂಬುದನ್ನು ಇತ್ತೀಚಿನ ದುರಂತಗಳು ಸಾಬೀತುಪಡಿಸುತ್ತಿವೆ.
ಪ್ರವಾಸಿಗರ ಅತಿಯಾದ ಗದ್ದಲ, ಸೆಲ್ಫಿ ವ್ಯಾಮೋಹ ಮತ್ತು ವಿಶ್ರಾಂತಿ ರಹಿತ ದುಡಿಮೆಯಿಂದ ಆನೆಗಳು ವಿಚಲಿತಗೊಂಡು ಹಠಾತ್ ಆಕ್ರೋಶಕ್ಕೆ ಒಳಗಾಗುತ್ತಿವೆ. ಸಾಕಾನೆಗಳು ಕೆರಳಿ ಮಾವುತರನ್ನೇ ಅಥವಾ ಪ್ರವಾಸಿಗರನ್ನೇ ತುಳಿದು ಸಾಯಿಸುವ ಇಂತಹ ಘಟನೆಗಳಿಗೆ ಅಸಲಿಗೆ ಹೊಣೆ ಯಾರು? ನಿಯಮ ಮೀರುವ ಪ್ರವಾಸಿಗರಾ, ಲಾಭದ ಬೆನ್ನಟ್ಟಿದ ಪ್ರವಾಸೋದ್ಯಮ ಇಲಾಖೆಯಾ ಅಥವಾ ಪ್ರಾಣಿಗಳ ನೈಸರ್ಗಿಕ ಹಕ್ಕನ್ನು ಕಸಿದುಕೊಳ್ಳುತ್ತಿರುವ ಇಡೀ ಮನುಕುಲವೇ? ಎಂಬ ಗಂಭೀರ ಚಿಂತನೆ ಮುನ್ನೆಲೆಗೆ ಬಂದಿದೆ.

ವಿಶೇಷವಾಗಿ ದುಬಾರೆ, ಮತ್ತಿಗೋಡು, ರಾಂಪುರ, ಅಥವಾ ಕೆ.ಗುಡಿಯಂತಹ ಆನೆ ಶಿಬಿರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಇತ್ತೀಚೆಗೆ ಆನೆಗಳ ದಾಳಿ ಮತ್ತು ಸಾವು-ನೋವುಗಳ ನಡೆದಿರುವುದು ಕಂಡುಬಂದಿದೆ.
ಇತ್ತೀಚಿಗೆ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತವು ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಪಳಗಿಸಿದ ಆನೆಗಳೂ ಕೂಡ ವನ್ಯಗುಣವನ್ನು ಮರೆಯುವುದಿಲ್ಲ ಮತ್ತು ಪ್ರವಾಸಿ ತಾಣಗಳಲ್ಲಿ ಸುರಕ್ಷತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಎಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವಿನ ಕಾಳಗದ ವೇಳೆ ತಮಿಳುನಾಡು ಮೂಲದ ಜಿನ್ಮು ಎಂಬುವವರು ಸಾವನ್ನಪ್ಪಿದ್ದರು.
ಶಿಬಿರದಲ್ಲಿದ್ದ ಪಳಗಿದ ಸಾಕಾನೆಯೊಂದರ ಹತ್ತಿರ ಜಿನ್ಮು ಮತ್ತು ಅವರ ಕುಟುಂಬದವರು ತೆರಳಿದ್ದರು. ಈ ವೇಳೆ ಮಾವುತರು ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದರು. ಇದನ್ನು ಗಮನಿಸುತ್ತಿದ್ದಾಗ ಆನೆಗಳು ಏಕಾಏಕಿ ದಾಳಿ ನಡೆಸಿದ್ದು, ಕಂಜನ್ ಆನೆಯ ದಾಳಿಗೆ ಮಾರ್ತಾಂಡ ಆನೆ ಆಯತಪ್ಪಿ ಬಿದ್ದಿದೆ. ಪರಿಣಾಮ ಜಿನ್ಮು ಆನೆಯ ಕೆಳಗೆ ಸಿಲುಕಿಕೊಂಡಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದರು.

ದುಬಾರೆ ಸಾಕಾನೆ ಶಿಬಿರದ ಮಾವುತರು ಹೇಳಿದ್ದೇನು?
ದುಬಾರೆ ಸಾಕಾನೆ ಶಿಬಿರದಲ್ಲಿ ಸುಮಾರು 32 ಸಾಕಾನೆಗಳು ಇವೆ. ಇದರಲ್ಲಿ 30 ಸಾಕಾನೆಗಳು ಸೌಮ್ಯ ಸ್ವಭಾವದ ಸಾಕಾನೆಗಳು ಆಗಿದ್ರೆ ಇನ್ನೂ ಎರಡು ಸಾಕಾನೆಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಶಿಬಿರದಲ್ಲಿ ಕಾಳಗ ನಡೆಸಿಕೊಂಡು ಸಾಕಷ್ಟು ಸುದ್ದಿ ಆಗುತ್ತಲೇ ಇರುತ್ತವೆ. ಶಿಬಿರದಲ್ಲಿ ಇರುವಂತಹ ಕಂಜನ್ ಹಾಗೂ ಧನಂಜಯ ಎಂಬ ಸಾಕಾನೆಗಳು ಕಾಳಗ ನಡೆಸುತ್ತಲೇ ಇರುತ್ತವೆ.
ಶಿಬಿರದಲ್ಲಿ ಸಾಕಾನೆಗಳನ್ನು ಮಕ್ಕಳಂತೆ ಸಾಕಲಾಗುತ್ತದೆ. ಆದ್ರೆ, ಈ ಎರಡೂ ಆನೆಗಳು ಸರಿಯಾಗಿ ಪಳಗಿಲ್ಲ. ಆನೆಗಳನ್ನು ಪಳಗಿಸುತ್ತಿದ್ದ ಮಾವುತ ಗೋಪಾಲ್ ಮೃತಪಟ್ಟಿದ್ದಾರೆ. ಅವರ ಹುದ್ದೆಗೆ ನುರಿತ ಮಾವುತರನ್ನು ನೇಮಿಸಿಯೇ ಇಲ್ಲ. ಈಗಿರುವ ಕೆಲ ಮಾವುತರು ಹಣ ಪಡೆದು ಆನೆಗಳ ಸ್ನಾನಕ್ಕೆ ಅವಕಾಶ ನೀಡುತ್ತಾರೆ. ಇತ್ತೀಚೆಗೆ ಹುಡುಗರನ್ನು ಮಾವುತರನ್ನಾಗಿ ಮಾಡುತ್ತಾರೆ. ಹಿರಿಯ ಮಾವುತರ ಮಾತನ್ನು ಹುಡುಗರು ಕೇಳೋದಿಲ್ಲ. ಹೀಗಾಗಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಲು ಸೂಚನೆ:
ಪ್ರವಾಸೋದ್ಯಮದ ಚಾರಣಪಥಗಳಲ್ಲಿ ಚಾರಣಿಗರ/ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಲಾಗಿದ್ದು, ಈ ಎಸ್‌ಒಪಿ ಜಾರಿ ಖಚಿತಪಡಿಸಿಕೊಳ್ಳುವವರೆಗೆ ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ಅದೇ ಪ್ರಕಾರವಾಗಿ ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಎಸ್‌ಒಪಿ ರೂಪಿಸಲು ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರದಲ್ಲಿ ಮೇ 19ರಿಂದ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಸದಂತೆ ಆದೇಶ ಹೊರಡಿಸಲು ಸೂಚಿಸಿದ್ದಾರೆ.
ಆನೆಗಳು ದಾಳಿ ನಡೆಸೋದ್ಯಾಕೆ?
ಸಾಮಾನ್ಯವಾಗಿ ದೇಶ ವಿದೇಶಗಳಿಂದ ಬರುವ ಸಾವಿರಾರು ಪ್ರವಾಸಿಗರು ಸಾಕಾನೆಗಳ ಬಳಿ ನಿಂತು ಫೋಟೋ ತೆಗೆಸಿಕೊಳ್ಳಬೇಕು, ಆಹಾರವನ್ನು ನೀಡಬೇಕು, ಆನೆಗಳಿಗೆ ಸ್ನಾನ ಮಾಡಿಸಬೇಕು ಎಂದು ಇಲ್ಲಿಗೆ ಅತ್ಯಂತ ಉತ್ಸಾಹದಿಂದ ಬರುತ್ತಾರೆ. ಕೆಲ ಪ್ರವಾಸಿಗರು ಸಾಕಾನೆಗಳ ಮಾವುತರಿಗೆ ಸ್ವಲ್ಪ ಹಣವನ್ನು ನೀಡಿ, ಸಾಕಾನೆಗಳಿಗೆ ಫೀಡಿಂಗ್ ಮಾಡಿಸೋದು, ಸ್ನಾನ ಮಾಡಿಸಲು ಮುಂದಾಗುತ್ತಾರೆ. ಇಂತಹ ಸಮಯದಲ್ಲಿ ಸಾಕಾನೆಗಳು ಯಾವ ರೀತಿಯಲ್ಲಿ ಇರುತ್ತದೆ. ಅದರ ಸ್ವಭಾವ ಯಾವ ರೀತಿ ಬದಲಾವಣೆ ಅಗುತ್ತದೆ ಎಂದು ಯಾರು ಊಹಿಸಲು ಸಾಧ್ಯವಾಗಲ್ಲ. ಅಲ್ಲದೇ ಸಾಕಾನೆಗಳನ್ನು ಪಳಗಿಸುವ ಮಾವುತ, ಕಾವಾಡಿಗಳ ಮೇಲೆಯೇ ಒಂದೊಂದು ಬಾರಿ ದಾಳಿ ನಡೆಸಿ ಮಾವುತರನ್ನೇ ಬಲಿ ಪಡೆದ ಉದಾಹರಣೆಗಳು ದುಬಾರೆಯಲ್ಲಿ ನಡೆದು ಹೋಗಿದೆ.

ಗಂಡಾನೆಗಳಲ್ಲಿ ಹಾರ್ಮೋನ್ ಏರುಪೇರಾಗುವ ಸಮಯದಲ್ಲಿ ಅವು ಅತ್ಯಂತ ಆಕ್ರಮಣಕಾರಿಯಾಗುತ್ತವೆ. ಈ ಸಮಯದಲ್ಲಿ ಅವುಗಳನ್ನು ಪ್ರವಾಸಿಗರಿಂದ ದೂರ ಇಡಬೇಕಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅಪಾಯ ತಪ್ಪಿದ್ದಲ್ಲ. ಇನ್ನೂ ಪ್ರವಾಸಿಗರು ಅತಿಯಾಗಿ ಗಲಾಟೆ ಮಾಡುವುದು, ಫ್ಲ್ಯಾಶ್ ಲೈಟ್ ಬಳಸಿ ಫೋಟೋ ತೆಗೆಯುವುದು, ಸೆಲ್ಫಿಗಾಗಿ ಆನೆಗಳ ತೀರಾ ಹತ್ತಿರ ಹೋಗುವುದು, ಆನೆಗಳಲ್ಲಿ ಕಿರಿಕಿರಿ ಮತ್ತು ಒತ್ತಡ ಉಂಟುಮಾಡುತ್ತದೆ.
ಹಬ್ಬ-ಹರಿದಿನಗಳು, ಸಫಾರಿಗಳು, ಮತ್ತು ಪ್ರವಾಸಿಗರ ಸರಣಿ ಭೇಟಿಯಿಂದಾಗಿ ಆನೆಗಳಿಗೆ ಸೂಕ್ತ ವಿಶ್ರಾಂತಿ ಸಿಗುವುದಿಲ್ಲ. ಕೆಲವೊಮ್ಮೆ ಆನೆಗಳು ಮಾವುತರು ಅಥವಾ ಕಾವಾಡಿಗರು ತಮಗೆ ನೀಡಿದ ದಂಡನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಸಮಯ ಸಿಕ್ಕಾಗ ತಿರುಗಿಬೀಳುವ ಸಾಧ್ಯತೆ ಇರುತ್ತದೆ.
ಪರಿಹಾರವೇನು?
ಇಂತಹ ದುರಂತಗಳನ್ನು ತಡೆಯಲು ಮತ್ತು ಪ್ರವಾಸೋದ್ಯಮ ಹಾಗೂ ಆನೆಗಳ ಹಿತರಕ್ಷಣೆಯನ್ನು ಸಮತೋಲನಗೊಳಿಸಲು ಕೆಲ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಸೂಕ್ಷ್ಮ ಪರಿಸರ ವಲಯಗಳಲ್ಲಿ ಮತ್ತು ಆನೆ ಶಿಬಿರಗಳಲ್ಲಿ ದಿನಕ್ಕೆ ಇಷ್ಟೇ ಪ್ರವಾಸಿಗರಿಗೆ ಅವಕಾಶ ನೀಡಬೇಕು ಎಂಬ ಕಟ್ಟುನಿಟ್ಟಿನ ನಿಯಮ ತರಬೇಕು. ಪ್ರವಾಸಿಗರು ಮತ್ತು ಆನೆಗಳ ನಡುವೆ ಕಡ್ಡಾಯವಾಗಿ ಸುರಕ್ಷಿತ ಅಂತರ ಇರಬೇಕು. ಆನೆಗಳಿಗೆ ಸ್ನಾನ ಮಾಡಿಸುವಾಗ ಅಥವಾ ಆಹಾರ ನೀಡುವಾಗ ಸಾರ್ವಜನಿಕರು ತೀರಾ ಹತ್ತಿರ ಹೋಗುವುದನ್ನು ನಿಷೇಧಿಸಬೇಕು. ವಾರದಲ್ಲಿ ಕನಿಷ್ಠ ಒಂದು ಅಥವಾ ಎರಡು ದಿನ ಆನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಆನೆಗಳಿಗೆ ವಿಶ್ರಾಂತಿ ನೀಡಬೇಕು.
ಇದಕ್ಕೆಲ್ಲ ಹೊಣೆ ಯಾರು?
ಅರಣ್ಯ ಇಲಾಖೆ ಮತ್ತು ಸರ್ಕಾರವು ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸಂಖ್ಯೆಗೆ ಮಿತಿ ಹೇರದಿರುವುದು. ವಾಣಿಜ್ಯ ಲಾಭಕ್ಕಾಗಿ ಆನೆಗಳ ಮೇಲಿನ ಒತ್ತಡವನ್ನು ನಿರ್ಲಕ್ಷಿಸುವುದು ಮತ್ತು ಸೂಕ್ತ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸದಿರುವುದು.
ಪ್ರವಾಸಿಗರು ವನ್ಯಜೀವಿ ನಿಯಮಗಳನ್ನು ಪಾಲಿಸದಿರುವುದು. ಆನೆಗಳ ಹತ್ತಿರ ಹೋಗಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು, ಪ್ರಾಣಿಗಳನ್ನು ಚುಡಾಯಿಸುವುದು ಅಥವಾ ಕೂಗಾಡುವುದು.
ಮಾವುತರು ಮತ್ತು ಕಾವಾಡಿಗರು ಕೆಲವು ಸಂದರ್ಭಗಳಲ್ಲಿ ಆನೆಗಳ ದೈಹಿಕ ಅಥವಾ ಮಾನಸಿಕ ಸ್ಥಿತಿಯನ್ನು ಸರಿಯಾಗಿ ಗುರುತಿಸದೆ ಸಫಾರಿಗೆ ಅಥವಾ ಸಾರ್ವಜನಿಕರ ಮುಂದೆ ತರುವುದು. ಪ್ರವಾಸಿಗರ ಕೈಯಿಂದ ತಿನ್ನಿಸದಂತೆ ಆದೇಶ ಹೊರಡಿಸಲು ಸೂಚಿಸಿದ್ದಾರೆ.

ಇದಕ್ಕೂ ಮುನ್ನ ಕರ್ನಾಟಕದಲ್ಲಿ ಈ ರೀತಿ ಘಟನೆ ನಡೆದಿತ್ತಾ?
ಇದಕ್ಕೂ ಮುನ್ನ ಕರ್ನಾಟಕದ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಆನೆ ಶಿಬಿರಗಳು ಹಾಗೂ ಪ್ರವಾಸಿ ತಾಣಗಳಾದ ಮತ್ತಿಗೋಡು, ರಾಂಪುರ, ಮತ್ತು ಕೆ.ಗುಡಿಯಲ್ಲಿ ಆನೆ ದಾಳಿ ಹಾಗೂ ಮಾನವ–ಪ್ರಾಣಿ ಸಂಘರ್ಷ ನಡೆದ ಉದಾಹರಣೆಗಳಿವೆ.
- ಮತ್ತಿಗೋಡು ಆನೆ ಶಿಬಿರ: ಕಳೆದ ಕೆಲವು ವರ್ಷಗಳ ಹಿಂದೆ (2021 ಮತ್ತು 2023 ರಲ್ಲಿ) ಇಲ್ಲಿನ ಸಾಕಾನೆಗಳ ನಡುವೆ ಭೀಕರ ಕಾಳಗ ನಡೆದಿತ್ತು. ಶಿಬಿರದ ಅತ್ಯಂತ ಬಲಿಷ್ಠ ಆನೆಗಳಾದ ‘ಬಾಲರಾಮ’ (ಹಿಂದೆ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಆನೆ) ಮತ್ತು ಇತರ ಆನೆಗಳ ನಡುವೆ ಸಂಘರ್ಷ ನಡೆದಿತ್ತು. ತದನಂತರ ಬಾಲರಾಮ ಆನೆ ಅನಾರೋಗ್ಯದಿಂದ ಮೃತಪಟ್ಟಿತ್ತು ಇದಕ್ಕೂ ಮುನ್ನ ಸುಬ್ರಮಣ್ಯ ಎಂಬ ಹೆಸರಿನ ಸಾಕಾನೆ, ಕಬಡ್ಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇಬ್ಬರು ಸ್ಥಳೀಯರನ್ನು ಬಲಿ ಪಡೆದಿತ್ತು. ನಂತರ ಈ ಆನೆಯನ್ನು ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿತ್ತು. ದುರದೃಷ್ಟವಶಾತ್, ಈ ಆನೆಯು ಅನಾರೋಗ್ಯದಿಂದ 2023ರ ಆಗಸ್ಟ್ ತಿಂಗಳಲ್ಲಿ ಮೃತಪಟ್ಟಿತು.
- ಕೆ.ಗುಡಿ ಆನೆ ಶಿಬಿರ: ಕೆ.ಗುಡಿ ಆನೆ ಶಿಬಿರವು ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (BRT) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಕರ್ನಾಟಕದ ಅತ್ಯಂತ ಹಳೆಯ ಮತ್ತು ನೈಸರ್ಗಿಕ ಸೌಂದರ್ಯದಿಂದ ಕೂಡಿದ ಪ್ರವಾಸಿ ತಾಣ ಹಾಗೂ ಆನೆ ಶಿಬಿರಗಳಲ್ಲಿ ಒಂದಾಗಿದೆ.
ನಿತ್ಯದಂತೆ ಪ್ರವಾಸಿಗರನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ಸಫಾರಿ ನಡೆಸುತ್ತಿದ್ದ ಗಣೇಶ ಆನೆಗೆ ಇಲಾಖೆಯು ನಿರಂತರ ಕೆಲಸ ನೀಡಿತ್ತು. ಒಂದು ದಿನ ಬೆಳಗಿನ ಜಾವ ಆನೆಗೆ ಆಹಾರ ನೀಡಲು ಮತ್ತು ಸಫಾರಿಗೆ ಸಿದ್ಧಗೊಳಿಸಲು ಮಾವುತ ಹತ್ತಿರ ಹೋದಾಗ, ಆನೆ ಹಠಾತ್ ಆಗಿ ತೀವ್ರ ಆಕ್ರೋಶಗೊಂಡಿತು.
ಆನೆ ತನ್ನ ಸೊಂಡಿಲಿನಿಂದ ಮಾವುತನನ್ನು ಎತ್ತಿ ನೆಲಕ್ಕೆ ಅಪ್ಪಳಿಸಿ, ಕಾಲಿನಿಂದ ತುಳಿಯಲು ಯತ್ನಿಸಿತು. ಸನಿಹದಲ್ಲೇ ಇದ್ದ ಕಾವಾಡಿಗರು ಮತ್ತು ಇತರ ಸಿಬ್ಬಂದಿ ಕೂಗಾಡಿ ಆನೆಯನ್ನು ಹೆದರಿಸಿದ್ದರಿಂದ ಮಾವುತನ ಜೀವ ಉಳಿಯಿತಾದರೂ, ಅವರು ತೀವ್ರವಾಗಿ ಗಾಯಗೊಂಡು ದೀರ್ಘಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ತೀವ್ರ ರಕ್ತಸ್ರಾವವಾದ್ದರಿಂದ ಸಾವನ್ನಪ್ಪಿದ್ದರು.

