Bengaluru City

ಎಣ್ಣೆಕಾಳು ಉತ್ಪಾದನೆಗೆ ಉತ್ತೇಜನ, ಸಂರಕ್ಷಿತ ದರ ಒದಗಿಸಲು ಕ್ರಮ: ಬೊಮ್ಮಾಯಿ

Published

on

Share this

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ರಾಜ್ಯದ ಕೃಷಿ ವಿಷಯಗಳ ಕುರಿತು ಚರ್ಚೆ ನಡೆಸಿದರು.

ರಾಜ್ಯದಲ್ಲಿ ಎಣ್ಣೆಕಾಳು ಉತ್ಪಾದನೆಗೆ ಒತ್ತು ನೀಡುವುದು, ತಾಳೆ ಬೆಳೆಗೆ ಉತ್ತೇಜನ ಹಾಗೂ ಕೃಷಿ ಉತ್ಪನ್ನ ಸಂಸ್ಕರಣೆ, ರಫ್ತಿಗೆ ಒತ್ತು ನೀಡುವ ಕುರಿತು ಚರ್ಚಿಸಲಾಯಿತು.

ಎಣ್ಣೆಕಾಳು ಬೆಳೆಯಲು ಉತ್ತೇಜನ:
ರಾಜ್ಯದಲ್ಲಿ ಎಣ್ಣೆಕಾಳು ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಆದರೆ ರೈತರಿಗೆ ವೈಜ್ಞಾನಿಕ ತರಬೇತಿ ಹಾಗೂ ಹೆಚ್ಚಿನ ಬೆಂಬಲದ ಅಗತ್ಯವಿದೆ. ಬೆಲೆಯಲ್ಲಿ ಭಾರಿ ಏರುಪೇರಾಗುವುದರಿಂದ ಉತ್ತಮ ಬೆಲೆ ಖಾತರಿ ಪಡಿಸಲು ಕ್ರಮ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ರೈತರು ನಮ್ಮ ದೇಶದಲ್ಲಿ ಬೆಳೆಯುವ ಬೆಳೆಗಳ ಆಮದಿಗೆ ತೆರಿಗೆ ವಿಧಿಸುವ ಮೂಲಕ ದೇಶದ ರೈತರಿಗೆ ನೆರವು ನೀಡಬೇಕು ಎಂದು ತಿಳಿಸಿದರು.

ಎಣ್ಣೆ ಕಾಳುಗಳ ಬಿತ್ತನೆ ಬೀಜಗಳ ಗುಣಮಟ್ಟ ಖಾತರಿ ಪಡಿಸಲು ಹಾಗೂ ಉತ್ಪಾದಕತೆ ಹೆಚ್ಚಿಸಲು ಸಹ ಆದ್ಯತೆ ನೀಡಬೇಕಾಗಿದೆ.  ಈ ಕುರಿತು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಬೇಕು. ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗಳಿಗೆ ಸಂರಕ್ಷಿತ ದರ ಒದಗಿಸುವ ಬಗ್ಗೆ ನಿರ್ದಿಷ್ಟವಾಗಿ ನೀತಿ ರೂಪಿಸಲಾಗುವುದು.  ಎಣ್ಣೆ ಬೀಜ ಉತ್ಪಾದನೆ ಹೆಚ್ಚಿಸಲು ಭಾರತ ಸರ್ಕಾರದ ಬೆಂಬಲ ಅಗತ್ಯ ಎಂದು ತಿಳಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೃಷಿ ಉತ್ಪನ್ನಗಳ ರಫ್ತಿಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಜೊತೆಗೆ ರಾಜ್ಯದ ಕೈಗಾರಿಕಾ ಇಲಾಖೆಯ ವ್ಯಾಪ್ತಿಯ ರಫ್ತು ಉತ್ತೇಜನ ಸಂಸ್ಥೆಗಳು ಕೃಷಿ ಉತ್ಪನ್ನಗಳ ರಫ್ತಿಗೆ ಬೆಂಬಲ ನೀಡುವಂತೆ ಸಲಹೆ ನೀಡಿದರು. ಇದನ್ನೂ ಓದಿ: ಮಾಜಿ ಗಂಡನ ಹೇಳಿಕೆಯಿಂದ ಚೀನಾದ ಖ್ಯಾತ ನಟಿಗೆ ಬಿತ್ತು 340 ಕೋಟಿ ರೂ. ದಂಡ

ಮೀನುಗಾರಿಕೆಗೆ ಪ್ರೋತ್ಸಾಹ:
ಸಮುದ್ರ ಹಾಗೂ ಒಳನಾಡು ಮೀನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾರ್ಚ್ 31 ರೊಳಗೆ ಮೀನುಗಾರರಿಗೆ 100 ಡೀಪ್ ಸೀ ಟ್ರಾಲರ್ಸ್ ಒದಗಿಸುವ ಕುರಿತು ಯೋಜನೆ ರೂಪಿಸುವಂತೆ ಮೀನುಗಾರಿಕೆ ಇಲಾಖೆಗೆ ನಿರ್ದೇಶನ ನೀಡಿದರು.

ಮೀನುಗಾರ ಸ್ನೇಹಿ ನೀತಿ ರೂಪಿಸುವ ಕುರಿತು, ಒಳನಾಡು ಮೀನುಗಾರಿಕೆಯಲ್ಲಿ ಸ್ಥಳೀಯವಾಗಿ ಉತ್ತಮ ಮೀನುಮರಿಗಳ ಉತ್ಪಾದನೆಗೆ ಒತ್ತು ನೀಡುವುದು, ಕೃಷಿ ಮತ್ತು ತೋಟಗಾರಿಕೆ ವಿವಿಗಳ ನಡುವೆ ಉತ್ತಮ ಸಮನ್ವಯ ಸಾಧಿಸಿ, ರೈತರಿಗೆ ಅನುಕೂಲ ಕಲ್ಪಿಸುವುದು ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ರಾಜ್ಯದಲ್ಲಿ 10 ಕೃಷಿ-ಹವಾಮಾನ ವಲಯಗಳನ್ನು ಆಧರಿಸಿ ಸಂಶೋಧನೆ ನಡೆಸುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ರೈತರ ಜಮೀನಿನಲ್ಲಿ ಬೆಳೆದಿರುವ ಕೃಷಿ ಅರಣ್ಯದಲ್ಲಿ ಮರ ಕಡಿಯಲು, ಮಾರಾಟ ಮಾಡಲು ಇತರ ರಾಜ್ಯಗಳಲ್ಲಿ ಅವಕಾಶವಿದೆ. ಆದರೆ ಕರ್ನಾಟಕದಲ್ಲಿ ಕಠಿಣ ನಿಯಮಗಳಿವೆ. ರೈತರ ಸ್ವಂತ ಬಳಕೆಗೆ ಈ ಮರಗಳನ್ನು ಕಡಿಯಲು ಸಹ ಅನಾನುಕೂಲವಾಗುತ್ತಿರುವ ಬಗ್ಗೆ ಕೇಂದ್ರ ಸಚಿವರು ಮುಖ್ಯಮಂತ್ರಿಗಳ ಗಮನ ಸೆಳೆದರು. ಈ ಬಗ್ಗೆ ನಿಯಮಗಳನ್ನು ಸಡಿಲಿಸಲು ಪರಿಶೀಲಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್ 

ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ಭಾರತ ಸರ್ಕಾರದ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಸುಮಿತಾ ಬಿಸ್ವಾಸ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ವಿ.ಪೊನ್ನುರಾಜು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications