ನವದೆಹಲಿ: ಎಲ್‌ಪಿಜಿ (LPG) ಹೊತ್ತ ಭಾರತದ ಹಡಗು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟುವಲ್ಲಿ ಯಶಸ್ವಿಯಾಗಿದೆ. ಇಂಧನ ಬಿಕ್ಕಟ್ಟಿನ ನಡುವೆ ಭಾರತದ ಹಡಗು (Indian Ship) ಜಲಸಂಧಿ ದಾಟಿರುವುದು ಭರವಸೆ ಮೂಡಿಸಿದೆ.
ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ‘ಸರ್ವಶಕ್ತಿ’ ಹಡಗು ಸುಮಾರು 45,000 ಟನ್ ಎಲ್‌ಪಿಜಿಯನ್ನು ಹೊತ್ತು ಸಾಗಿದೆ. ಶನಿವಾರ ಇರಾನ್‌ನ ಲಾರಾಕ್ ಮತ್ತು ಕೆಶ್ಮ್ ದ್ವೀಪಗಳನ್ನು ದಾಟಿ ಒಮಾನ್ ಕೊಲ್ಲಿಗೆ ಸಾಗಿದಂತೆ ಕಂಡುಬಂದಿದೆ ಎಂದು ಹಡಗು ಟ್ರ್ಯಾಕಿಂಗ್ ದತ್ತಾಂಶಗಳು ತಿಳಿಸಿವೆ. ಇದನ್ನೂ ಓದಿ: ಇರಾನ್ ಡ್ರೋನ್ ನಾಶ ಮಾಡಲು ಯುಎಇಗೆ ‘ಐರನ್ ಬೀಮ್’ ಲೇಸರ್ ಆಯುಧ ಕೊಟ್ಟ ಇಸ್ರೇಲ್
ಅತಿದೊಡ್ಡ ಅನಿಲ ವಾಹಕ ನೌಕೆ ಈ ಹಿಂದೆ ಪರ್ಷಿಯನ್ ಕೊಲ್ಲಿ ಮತ್ತು ಭಾರತೀಯ ಬಂದರುಗಳ ನಡುವೆ ಸಂಚಾರ ನಡೆಸಿದ್ದು, ಈಗ ದೇಶಕ್ಕೆ ಬರುತ್ತಿದೆ. ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಹಡಗುಗಳು ಸುರಕ್ಷತಾ ಕ್ರಮಗಳೊಂದಿಗೆ ಸಂಚಾರ ನಡೆಸುತ್ತಿವೆ.
ಇರಾನ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದ ಬಳಿಕ ಹಾರ್ಮುಜ್ ಮೂಲಕ ಹಡಗುಗಳ ಸಾಗಣೆ ಮತ್ತಷ್ಟು ಕ್ಷೀಣಿಸಿತು. ಕಳೆದ ತಿಂಗಳು ಅಸ್ತವ್ಯಸ್ತವಾಗಿದ್ದ ಮಾರ್ಗವನ್ನು ತಾತ್ಕಾಲಿಕವಾಗಿ ತೆರೆದು ಮತ್ತೆ ಮುಚ್ಚಲಾಗಿದೆ. ಈ ಅವಧಿಯಲ್ಲಿ ಹಲವು ಹಡಗುಗಳು ಮಾರ್ಗವನ್ನು ದಾಟಿವೆ. ಅದರಲ್ಲಿ ಭಾರತ ‘ಸರ್ವಶಕ್ತಿ’ ಹಡಗು ಕೂಡ ಒಂದು. ಇದನ್ನೂ ಓದಿ: ಒಪೆಕ್ ಒಕ್ಕೂಟಕ್ಕೆ ಗುಡ್ ಬೈ – ತೈಲ ಮಾರುಕಟ್ಟೆಯಲ್ಲಿ ‘ದುಬೈ’ ಸ್ವತಂತ್ರ ಆಟ ಶುರು| ಸೌದಿ ಜೊತೆ ಯುಎಇ ಕಿತ್ತಾಟ ಯಾಕೆ?
ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಎರಡನೇ ಅತಿದೊಡ್ಡ ಎಲ್‌ಪಿಜಿ ಗ್ರಾಹಕ ರಾಷ್ಟ್ರವಾಗಿದೆ. ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾಗಿರುವ ಪೂರೈಕೆ ಬಿಕ್ಕಟ್ಟನ್ನು ದೇಶ ಎದುರಿಸುತ್ತಿದೆ. ಅಡುಗೆ ಇಂಧನದ ತೀವ್ರ ಕೊರತೆಯು ದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟು ಮಾಡಿದೆ.

