ಅಮೆರಿಕ-ಇರಾನ್ ಯುದ್ಧದ (USA- Iran War) ಉದ್ವಿಗ್ನತೆಯಿಂದ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿದೆ. ಇದರ ಪರಿಣಾಮ ಭಾರತದಲ್ಲಿನ ತೈಲ ಮಾರುಕಟ್ಟೆ ಕಂಪನಿಗಳು (OMC) ದೊಡ್ಡ ಪ್ರಮಾಣದ ನಷ್ಟ ಅನುಭವಿಸುತ್ತಿವೆ. ವಿಶೇಷವೆಂದರೆ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೆಲ ಮಟ್ಟಿಗೆ ಹೆಚ್ಚಿಸಿದರೂ ಕಂಪನಿಗಳ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಿಲ್ಲ.
ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆ ಏರಿಕೆ ದೇಶಾದ್ಯಂತ ಜನರಲ್ಲಿ ಆತಂಕ ಮೂಡಿಸಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧ, ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಜಾಗತಿಕ ತೈಲ ಸರಬರಾಜಿನ ವ್ಯತ್ಯಯದಿಂದ ಭಾರತದಲ್ಲೂ ಇಂಧನ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬಿದ್ದಿದೆ. ಇದೇ ಕಾರಣಕ್ಕೆ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ದರಗಳನ್ನು ಹೆಚ್ಚಿಸಿವೆ.
ಇಂದು ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿಯಷ್ಟು ಹೆಚ್ಚಳವಾಗಿದ್ದು, ಸಿಎನ್‌ಜಿ ದರ ಪ್ರತಿ ಕಿಲೋಗ್ರಾಂಗೆ 2 ರೂಪಾಯಿ ಏರಿಕೆಯಾಗಿದೆ. ಜಾಗತಿಕವಾಗಿ ಇಂಧನ ಬೆಲೆಗಳು ಅಮೆರಿಕ(45%) ಸ್ಪೇನ್ (34%), ಜಪಾನ್ (30%) ಮತ್ತು ಜರ್ಮನಿ (27%) ಅಂತಹ ದೇಶಗಳಲ್ಲಿ ಭಾರಿ ಏರಿಕೆಯಾಗಿದ್ದರೂ ಭಾರತದಲ್ಲಿ ದರಗಳನ್ನು ಸ್ಥಿರವಾಗಿಡುವ ಮೂಲಕ ಹಣದುಬ್ಬರ ಏರದಂತೆ ಸದ್ಯಕ್ಕೆ 3 ರೂ. ಮಾತ್ರರಿಕೆ ಮಾಡಲಾಗಿದೆ.
ಬೆಲೆ ಏರಿಕೆ ಏಕೆ?
ಇರಾನ್ ಯುದ್ಧದ ಪರಿಣಾಮ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಮೇಲೆ ನೇರವಾಗಿ ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರವಾದ ಕಾರಣ ಕಚ್ಚಾ ತೈಲ ಉತ್ಪಾದನೆ ಮತ್ತು ಸಾಗಾಟದಲ್ಲಿ ಅಡಚಣೆ ಉಂಟಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸಂಚಾರ ಕಡಿಮೆಯಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಕುಸಿದಿದೆ.
ಭಾರತ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ಅದರ ನೇರ ಪರಿಣಾಮ ದೇಶೀಯ ಇಂಧನ ದರಗಳ ಮೇಲೂ ಬೀಳುತ್ತದೆ.

ತೈಲ ಕಂಪನಿಗಳಿಗೆ ಎಷ್ಟು ನಷ್ಟ?
ತೈಲ ಮಾರುಕಟ್ಟೆ ಕಂಪನಿಗಳು ಈಗಾಗಲೇ ಭಾರೀ ನಷ್ಟ ಅನುಭವಿಸುತ್ತಿವೆ. ವರದಿಗಳ ಪ್ರಕಾರ, ಇಂಧನ ಸಬ್ಸಿಡಿ ಮತ್ತು ಹೆಚ್ಚಿದ ಉತ್ಪಾದನಾ ವೆಚ್ಚಗಳಿಂದ ಕಂಪನಿಗಳಿಗೆ ಪ್ರತಿದಿನ ಸುಮಾರು 1,600 ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ. ಇದನ್ನೂ ಓದಿ: ಪೆಟ್ರೋಲ್ ದರ ಏರಿಕೆ ಬೆನ್ನಲ್ಲೇ ಸಿಎನ್‌ಜಿ ದರವೂ ಏರಿಕೆ
3 ರೂಪಾಯಿ ಏರಿಕೆ ಲಾಭವೇ?
ತಜ್ಞರ ಪ್ರಕಾರ, ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಿದರೂ ಅದು ತೈಲ ಕಂಪನಿಗಳ ನಷ್ಟವನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದಿಲ್ಲ. ಈ ಏರಿಕೆಯಿಂದ ಕಂಪನಿಗಳಿಗೆ ಸ್ವಲ್ಪ ಮಟ್ಟಿನ ನೆರವು ಸಿಗಬಹುದು. ಆದರೆ ಇರಾನ್ ಯುದ್ಧ ದೀರ್ಘಕಾಲ ಮುಂದುವರಿದರೆ ಕಂಪನಿಗಳ ಮೇಲೆ ಇನ್ನಷ್ಟು ಆರ್ಥಿಕ ಒತ್ತಡ ಉಂಟಾಗಬಹುದು.
ವರದಿಗಳ ಪ್ರಕಾರ, ತೈಲ ಕಂಪನಿಗಳ ನಷ್ಟವನ್ನು ಸಂಪೂರ್ಣವಾಗಿ ಸಮತೋಲನಗೊಳಿಸಲು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 28 ರಿಂದ 33 ರೂಪಾಯಿಗಳ ರವರೆಗೆ ಹೆಚ್ಚಿಸಬೇಕಾಗಬಹುದು. ಆದರೆ ಇದು ಸಾರ್ವಜನಿಕರ ಮೇಲೆ ದೊಡ್ಡ ಹೊರೆ ಆಗುವುದರಿಂದ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುವುದು ಕಷ್ಟ ಎನ್ನಲಾಗುತ್ತಿದೆ.
ಸರ್ಕಾರ ನೆರವು:
ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು (Excise Duty) ಕಡಿತಗೊಳಿಸುವ ಮೂಲಕ ಕಂಪನಿಗಳ ಮೇಲಿನ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು ಪ್ರಯತ್ನಿಸಿದೆ. ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 10 ರೂ. ಅಬಕಾರಿ ಸುಂಕವನ್ನು ಕಡಿತ ಮಾಡಲಾಗಿದೆ. ಈ ಸುಂಕ ಕಡಿತವಿಲ್ಲದಿದ್ದರೆ ಕಂಪನಿಗಳ ಒಟ್ಟು ನಷ್ಟವು 62,500 ಕೋಟಿ ರೂ. ದಾಟುತ್ತಿತ್ತು ಎಂದು ಅಂದಾಜಿಸಲಾಗಿದೆ.

ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದೆ. ವಿಶ್ವದ ದೊಡ್ಡ ಪ್ರಮಾಣದ ಕಚ್ಚಾ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ಸಂಘರ್ಷದ ಪರಿಣಾಮ ಈ ಮಾರ್ಗದಲ್ಲಿ ಅಶಾಂತಿ ಹೆಚ್ಚಾಗಿದೆ. ಇದರ ಪರಿಣಾಮ ಜಾಗತಿಕ ಇಂಧನ ಸರಬರಾಜು ಕುಂಠಿತಗೊAಡಿದ್ದು, ಅನೇಕ ದೇಶಗಳು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕೆಲವು ರಾಷ್ಟ್ರಗಳು ಇಂಧನ ಬಳಕೆಗೆ ಮಿತಿ ವಿಧಿಸುವ ಪರಿಸ್ಥಿತಿಗೂ ತಲುಪಿವೆ.
ಜನರ ಮೇಲೆ ಪರಿಣಾಮ ಏನು?
ಟೆಂಪೋ ಮತ್ತು ಟ್ರಕ್‌ಗಳು ಡೀಸೆಲ್ ಬಳಸುವುದರಿಂದ ಸರಕು ಸಾಗಣೆ ದರಗಳು ತಕ್ಷಣವೇ ದುಬಾರಿಯಾಗಲಿವೆ. ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ಬರುವ ತರಕಾರಿ, ಹಣ್ಣು, ಧಾನ್ಯಗಳು ಮತ್ತು ಹಾಲಿನ ಬೆಲೆಗಳು ಹೆಚ್ಚಾಗಲಿವೆ. ಖಾಸಗಿ ಬಸ್ಸುಗಳು, ಆಟೋ ಮತ್ತು ಟ್ಯಾಕ್ಸಿಗಳ ಪ್ರಯಾಣ ದರವೂ ಏರಿಕೆಯಾಗಲಿದೆ.
2022 ರಲ್ಲಿ 8 ರೂ. ಕಡಿತ:
ಮಾರ್ಚ್ 2024 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2 ರಷ್ಟು ಕಡಿತಗೊಳಿಸಲಾಗಿತ್ತು. ಮೇ 2022 ಅಬಕಾರಿ ಸುಂಕ ಕಡಿತವಾಗಿದ್ದರಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 8 ರೂ. ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 6 ರೂ.ರಷ್ಟು ಇಳಿಕೆಯಾಗಿತ್ತು. ಕೇಂದ್ರದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವ್ಯಾಟ್ (VAT) ಕಡಿಮೆ ಮಾಡಿದ್ದರಿಂದ, ಗ್ರಾಹಕರಿಗೆ ಒಟ್ಟಾರೆಯಾಗಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 9.5 ರೂ. ಮತ್ತು ಡೀಸೆಲ್ ಮೇಲೆ 7 ರೂ. ರಷ್ಟು ದರ ಇಳಿಕೆಯ ಲಾಭ ಸಿಕ್ಕಿತ್ತು.

