– ವಿದೇಶಿ ಪ್ರಯಾಣಕ್ಕೆ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾಪ ಇಲ್ಲ: ಮೋದಿ
ನವದೆಹಲಿ: ವಿದೇಶಿ ಪ್ರಯಾಣದ ಮೇಲೆ ಸೆಸ್, ತೆರಿಗೆ ಅಥವಾ ಸರ್‌ಚಾರ್ಜ್ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಉನ್ನತ ಮಟ್ಟದಲ್ಲಿ ಚರ್ಚಿಸುತ್ತಿದೆ ಎನ್ನುವ ವರದಿಗಳನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ತಳ್ಳಿಹಾಕಿದ್ದಾರೆ.
ಮಾಧ್ಯಮವೊಂದರ ವರದಿಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ.
This is totally false.
Not an iota of truth in this.
There is no question of putting such restrictions on foreign travel.
We remain committed to improving ‘Ease of Doing Business’ and ‘Ease of Living’ for our people. https://t.co/9lxjbxz0nV
— Narendra Modi (@narendramodi) May 15, 2026
ʻಇದು ಸಂಪೂರ್ಣ ಸುಳ್ಳು, ಇದರಲ್ಲಿ ಸ್ವಲ್ಪವೂ ಸತ್ಯವಿಲ್ಲ. ವಿದೇಶಿ ಪ್ರಯಾಣದ ಮೇಲೆ ಅಂತಹ ನಿರ್ಬಂಧಗಳನ್ನ ಹೇರುವ ಪ್ರಶ್ನೆಯೇ ಇಲ್ಲ. ನಮ್ಮ ಜನರು ಸುಲಭವಾಗಿ ವ್ಯವಹಾರ ಮಾಡಲು ಮತ್ತು ಸುಲಭ ಜೀವನ ನಡೆಸಲು ಅನುಕೂಲ ಮಾಡಿಕೊಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಧಾನಿಗಳು ಪ್ರತಿಕ್ರಿಯೆ ನೀಡಿದ ಬಳಿಕ ವರದಿ ಮಾಡಿದ ಮಾಧ್ಯಮ ಸಂಸ್ಥೆಯು ಕ್ಷಮೆಯಾಚಿಸಿದೆ. ಸರ್ಕಾರವು ವಿದೇಶಿ ಪ್ರಯಾಣದ ಮೇಲೆ ತೆರಿಗೆ/ಸೆಸ್ ವಿಧಿಸಲು ಚಿಂತಿಸುತ್ತಿದೆ ಎನ್ನುವ ನಮ್ಮ ವರದಿ ನಿಖರವಾಗಿಲ್ಲ. ನಾವು ಆ ಸುದ್ದಿಯನ್ನು ಹಿಂತೆಗೆದುಕೊಳ್ಳುತ್ತೇವೆ ಮತ್ತು ತಪ್ಪಿಗೆ ವಿಷಾದಿಸುತ್ತೇವೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಪ್ರಧಾನಿಗಳ ಮನವಿ ಏನಿತ್ತು?
ಮಧ್ಯಪ್ರಾಚ್ಯದಲ್ಲಿನ ಅಶಾಂತಿಯಿಂದಾಗಿ, ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟಿನ ಜೊತೆಗೆ, ತೈಲದ ಅಭಾವವೂ ಎದುರಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯದ ಕರೆ ನೀಡಿದ್ದರು. ಅದಕ್ಕಾಗಿ ಸಾರ್ವಜನಿಕ ಸಾರಿಗೆ ಬಳಸುವಂತೆ ಹಾಗೂ ಅನಗತ್ಯ ವಿದೇಶಿ ಪ್ರಯಾಣ ತಪ್ಪಿಸುವಂತೆ ಮತ್ತು ಚಿನ್ನ ಖರೀದಿಗಳಿಂದ ದೂರ ಇರುವಂತೆ ಕರೆ ನೀಡಿದ್ದರು. ಈ ಮೂಲಕ ಪೆಟ್ರೋಲ್, ಡೀಸೆಲ್ ಮತ್ತು ವಿದೇಶಿ ವಿನಿಮಯ ಮೀಸಲುಗಳನ್ನು ಸಂರಕ್ಷಿಸಲು ನಾಗರಿಕರು ಸಹಕರಿಸುವಂತೆ ಮನವಿ ಮಾಡಿದ್ದರು.

