ನವದೆಹಲಿ: ಭಾರತ ಕಳೆದ 4 ವರ್ಷಗಳಲ್ಲಿ ಇಂಧನ ಬೆಲೆಗಳನ್ನ ಹೆಚ್ಚಿಸಿಲ್ಲ (No Fuel Price Hike). ಈಗಲೂ ಕಚ್ಚಾ ತೈಲ, ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಯ ಸಾಕಷ್ಟು ದಾಸ್ತಾನನ್ನು ಹೊಂದಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ (Hardeep Puri) ಹೇಳಿದ್ದಾರೆ.
ಹಾರ್ಮುಜ್ ಬಿಕ್ಕಟ್ಟಿನಿಂದ ವಿವಿಧ ದೇಶಗಳು ಎದುರಿಸುತ್ತಿರುವ ತೈಲ ಬಿಕ್ಕಟ್ಟು ಕುರಿತು ಮಾತನಾಡಿದ ಅವರು, ಹಾರ್ಮುಜ್ ಬಿಕ್ಕಟ್ಟಿನಿಂದ ಹಲವು ದೇಶಗಳು ಇಂಧನ ಬೆಲೆ ಏರಿಕೆ ಮತ್ತು ತೈಲ ಕೊರತೆ ಎದುರಿಸುತ್ತಿದ್ದರೂ ಭಾರತ (India) ಸ್ಥಿರ ಸ್ಥಿತಿಯಲ್ಲಿದೆ. ಕಳೆದ 4 ವರ್ಷಗಳಲ್ಲಿ ಇಂಧನ ಬೆಲೆ ಏರಿಕೆ ಮಾಡಿಲ್ಲ. ಬೆಲೆ ಏರಿಕೆ ವಿಷಯದಲ್ಲೂ ವಿಶ್ವದ ಇತರ ರಾಷ್ಟ್ರಗಳಿಗಿಂತ ನಾವು ಭಿನ್ನವಾಗಿದ್ದೇವೆ ಎಂದು ಪುರಿ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ (Hormuz Strait) ನಿರ್ಬಂಧ 75ನೇ ದಿನಕ್ಕೆ ಕಾಲಿಟ್ಟಿದೆ. ಈ ಬಿಕ್ಕಟ್ಟು ಶುರುವಾದಾಗ ಭಾರತಕ್ಕೂ ಕಳವಳ ಇತ್ತು. ಆದ್ರೆ ದೇಶೀಯ ಎಲ್‌ಪಿಜಿ ಉತ್ಪಾದನೆ ಹೆಚ್ಚಿಸುವ ಮೂಲಕ ಭಾರತ ಸವಾಲವನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿದೆ. ದಿನಕ್ಕೆ 36,000 ಮೆಟ್ರಿಕ್ ಟನ್‌ಗಳಷ್ಟಿದ್ದ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು 54,000 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಿದ್ದೇವೆ. ಸದ್ಯ ಭಾರತ 60 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನನ್ನು ಹೊಂದಿದೆ. 60 ದಿನಗಳಿಗಾಗುವಷ್ಟು ಎಲ್‌ಎನ್‌ಜಿ, 45 ದಿನಗಳಿಗಾಗುವಷ್ಟು ಎಲ್‌ಪಿಜಿ ಸೇರಿದಂತೆ ಸಾಕಷ್ಟು ಇಂಧನ ಮೀಸಲು ಹೊಂದಿದೆ, ತೈಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ವಿವರಿಸಿದ್ದಾರೆ.

ದಿನಕ್ಕ 1,000 ಕೋಟಿ ನಷ್ಟ
ಇನ್ನೂ ದೀರ್ಘಕಾಲದ ಅಡಚಣೆಯಿಂದ ಭಾರತೀಯ ತೈಲ ಕಂಪನಿಗಳು ಆರ್ಥಿಕ ಒತ್ತಡ ಎದುರಿಸುತ್ತಿವೆ. ತೈಲ ಕಂಪನಿಗಳು ದಿನಕ್ಕೆ 1,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನೂ ಎಲ್‌ಪಿಜಿ ಬೇಡಿಕೆಯು 90,000 ಮೆಟ್ರಿಕ್ ಟನ್‌ಗಳಿಂದ 75,000 ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ, ಇದಕ್ಕೆ ಭಾಗಶಃ ಹವಾಮಾನ ವೈಪರೀತ್ಯ ಕಾರಣವೂ ಇದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ನಿರ್ವಹಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

