– ಮೋದಿ ಕ್ಷಮೆ ಕೇಳಲೇಬೇಕು
ನವದೆಹಲಿ: ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರನ್ನ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಲೋಕಸಭೆ ಕಲಾಪ ಸೋಮವಾರದ ವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನ್ ಅವರನ್ನ ವಜಾಗೊಳಿಸುವವರೆಗೆ ಸಂಸತ್ತಿನ ಯಾವುದೇ ಚರ್ಚೆಗಳಲ್ಲಿ (Parliament Discussion) ವಿಪಕ್ಷಗಳು ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಮೂರು ಮುಖ್ಯ ಬೇಡಿಕೆಗಳನ್ನೀ ಮತ್ತೆ ಪ್ರಸ್ತಾಪಿಸಿದ್ದಾರೆ.

ವಿದ್ಯಾರ್ಥಿಗಳು ಮೂರು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭ್ರಷ್ಟ ಶಿಕ್ಷಣ ಸಚಿವರನ್ನ ವಜಾಗೊಳಿಸಬೇಕು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು. ಈ ಬೇಡಿಕೆ ಈಡೇರಿಸುವವರೆಗೆ ಯಾವುದೇ ಚರ್ಚೆ ಸಾಧ್ಯ ಇಲ್ಲ ಎಂದಿದ್ದಾರೆ.
ಲೋಕಸಭೆ ಕಲಾಪ ಮುಂದೂಡಿಕೆ
ಸಂಸತ್ತಿನ ಮುಂಗಾರು ಅಧಿವೇಶನದ 5ನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ (Rajya Sabha) ತೀವ್ರ ಗದ್ದಲ ಮುಂದುವರಿಯಿತು. ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಸದನ ಪುನಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ವಿಪಕ್ಷ ಸದಸ್ಯರು ʻEducation Minister Resignʼ, ʻಇಸ್ತೀಫಾ, ಇಸ್ತೀಫಾʼ ಎಂದು ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಭಾರೀ ಗದ್ದಲ ಉಂಟಾಗಿ, ಲೋಕಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು.
