– ರಾಮನಗರ `ರಹೀಂ ನಗರ’ ಆಗುತ್ತೇನೋ
– ಕಳ್ಳಮತದಾನಕ್ಕೆ ಕಾಂಗ್ರೆಸ್ ಅಕ್ರಮ ಶುರು;ಆರೋಪ
ರಾಮನಗರ: ರಾಮನಗರದಲ್ಲಿ SIR (Special Intensive Revision) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ(Nikhil Kumaraswamy), ದೆಹಲಿಯಲ್ಲಿ ಕುಳಿತು ವೋಟ್ ಚೋರಿ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ(Rahul Gandhi), ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಬಂದು ನೋಡಲಿ. ಈ ವಿಚಾರವನ್ನು ದೆಹಲಿಗೆ ತೆಗೆದುಕೊಂಡು ಹೋಗಿ, ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲೇ ಪ್ರೆಸ್‌ಮೀಟ್ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಮೂರು ದಿನಗಳ ಹಿಂದೆ ನಮ್ಮ ಬಿಎಲ್‌ಎ-2 ಗಳನ್ನು ಕರೆಸಿ ತಹಶೀಲ್ದಾರ್ ದಾರಿ ತಪ್ಪಿಸಿದ್ದಾರೆ. ಮುಸ್ಲಿಮರ ವಾರ್ಡ್ಗಳಾದ ಟಿಪ್ಪು ನಗರ, ಯಾರಬ್ ನಗರ, ಮೆಹಬೂಬ್ ನಗರಗಳಲ್ಲಿ ಅಕ್ರಮವಾಗಿ ಎಸ್‌ಐಆರ್ ನಡೆಯುತ್ತಿದೆ. ಅಲ್ಲಿಗೆ ಹೋಗಲು ಭಯದ ವಾತಾವರಣ ಸೃಷ್ಟಿಸಲಾಗಿದೆ. ಆದರೂ ನಮ್ಮ ಕಾರ್ಯಕರ್ತರು ಧೈರ್ಯ ಮಾಡಿ ಒಳಗೆ ಹೋಗಿ ವಿಡಿಯೋ ಸಾಕ್ಷ್ಯ ತಂದಿದ್ದಾರೆ. ಇದನ್ನು ನೋಡಿದರೆ ರಾಮನಗರ ಮುಂದೆ ‘ರಹೀಂ ನಗರ’ ಆಗುತ್ತೋ ಏನೋ, ಐಎಎಸ್ ಓದಿರುವ ಈ ಆಸಾಮಿಗೆ ಮೂಲ ನಿಯಮಗಳೇ ಗೊತ್ತಿಲ್ಲ. ಅರ್ಜಿ ಹಂಚುವಾಗ ಮೂರೂ ಪಕ್ಷಗಳ ಬಿಎಲ್‌ಒಗಳು ಇರಬೇಕು, ಮೂರು ಬಾರಿ ಮನೆಮನೆಗೆ ಹೋಗಿ ಹಂಚಬೇಕು. ಆದರೆ ರಾಮನಗರ ಡಿಸಿ ತಾನೇ ಹೊಸ ಕಾನೂನು ಬರೆದಂತೆ ವರ್ತಿಸುತ್ತಾ ನನ್ನನ್ನೇ ದಾರಿ ತಪ್ಪಿಸುತ್ತಿದ್ದಾರೆ. ಈಗ ಪ್ರತಿಭಟನೆಗೆ ಹೆದರಿ ತಲೆಮರೆಸಿಕೊಂಡು, ಕನಕಪುರದಲ್ಲಿ ಸಿಎಂ ಭಾಗವಹಿಸುತ್ತಿರುವ ಮಠದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅದೇನು ಸರ್ಕಾರಿ ಕಾರ್ಯಕ್ರಮವೇ? ಅಲ್ಲಿಗೆ ಹೋಗಲು ಇವರಿಗೆ ಪ್ರೋಟೋಕಾಲ್ ಇದೆಯಾ? ಡಿಸಿಗೆ ಮಾನ-ಮರ್ಯಾದೆ ಇದೆಯಾ? ನೀವು ಸಿಎಂಗೆ ಮುಖ ತೋರಿಸಲು ಹೋಗಬೇಕಾ ಗುರು? ನೀವು ಟೂರಿಂಗ್ ಟಾಕೀಸ್ ಗಿರಾಕಿಗಳು, ಯಾರದ್ದೋ ಮುಲಾಜಿಗೆ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.
ಕುಣಿಗಲ್‌ನಲ್ಲಿ ಒಂದು ಕೆಟ್ಟ ಜೀನ್ ಇದೆ. ಅವರು ಡಾಕ್ಟರ್ ಅಂತೆ, ಯಾವ ರೀತಿ ಆಪರೇಷನ್ ಮಾಡ್ತಾರೋ ಗೊತ್ತಿಲ್ಲ, ಅಲ್ಲೂ ಎಸ್‌ಐಆರ್ ಅಕ್ರಮ ಮಾಡ್ತಿದ್ದಾರೆ. ಇನ್ನು ಇಲ್ಲಿನ ಜನಪ್ರತಿನಿಧಿ ಪುಣ್ಯಾತ್ಮ ಆಸ್ಪತ್ರೆಯಲ್ಲೇ ಕೂತುಕೊಂಡು ಬಿಎಲ್‌ಒಗಳಿಗೆ ಫೋನ್ ಮಾಡಿ ನಮ್ಮಪ್ಪನ ಸರ್ಕಾರ ಇದೆ, ನಾನು ಹೇಳಿದ ಹಾಗೆ ಮಾಡು ಎಂದು ಬೆದರಿಸುತ್ತಿದ್ದಾರಂತೆ. ಕಳೆದ ಚುನಾವಣೆಯಲ್ಲೂ ನನ್ನ ವಿರುದ್ಧ ಹೊರರಾಜ್ಯದ ಜನರನ್ನು ತಂದು ಕಳ್ಳ ಮತದಾನ ಮಾಡಿಸಿ ಇವರು ಗೆದ್ದಿದ್ದರು. ರಾಮನಗರದ ಜನತೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಹಾಳಾಗಲಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಒಂದು ದಿನವೂ ಅಧಿಕಾರ ದುರುಪಯೋಗಪಡಿಸಿಕೊಂಡಿರಲಿಲ್ಲ ಎಂದು ನೆನಪಿಸಿಕೊಂಡರು.ಇದನ್ನೂ ಓದಿ: ಫುಟ್‌ಬಾಲ್ ಜಗತ್ತಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಕ್ರಿಸ್ಟಿಯಾನೊ ರೊನಾಲ್ಡೊ ಸಹೋದರಿ
ದೆಹಲಿಯಲ್ಲಿ ಕುಳಿತುಕೊಂಡು ವೋಟ್ ಚೋರಿ ಬಗ್ಗೆ ಮಾತನಾಡುವ ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ಅವರೇ, ಇಲ್ಲಿ ನಿಮ್ಮದೇ ಸರ್ಕಾರ ಏನು ಮಾಡುತ್ತಿದೆ ಬಂದು ನೋಡಿ. ಸಿಎಂ ಸಿದ್ದರಾಮಯ್ಯ ಮಾಡುತ್ತಿರುವ ಎಲ್ಲಾ ಯೋಜನೆಗಳು 30 ಸಾವಿರ ಕೋಟಿ ದಾಟುತ್ತಿವೆ. ಇದನ್ನು ನೋಡಿದರೆ ದೆಹಲಿಯ ಗಾಂಧಿ ಕುಟುಂಬಕ್ಕೆ ಇವರು ಯಾವುದೋ ದೊಡ್ಡ ಕಮಿಟ್‌ಮೆಂಟ್ ಕೊಟ್ಟು ಬಂದ ಹಾಗೆ ಕಾಣುತ್ತಿದೆ. ಸುಮಾರು 9 ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದು ಚುನಾವಣೆ ಮಾಡಲು ಫ್ಲ್ಯಾನ್ ಮಾಡುತ್ತಿದ್ದಾರೆ. ದೆಹಲಿಗೆ ಹೋಗಿ, ರಾಹುಲ್ ಗಾಂಧಿಗೆ ಅರ್ಥವಾಗಲಿ ಎಂದೇ ನಾನು ಇಂಗ್ಲಿಷ್‌ನಲ್ಲಿ ಪ್ರೆಸ್‌ಮೀಟ್ ಮಾಡುತ್ತೇನೆ ಎಂದು ಸವಾಲು ಹಾಕಿದರು.
ನಿನ್ನೆ ಕಲ್ಯಾಣ ಮಂಟಪದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ನಿಯಮ ಉಲ್ಲಂಘಿಸಿದ ಬಿಎಲ್‌ಒಗಳನ್ನು ತಕ್ಷಣವೇ ಸಸ್ಪೆಂಡ್ ಮಾಡಬೇಕು, ಕೇವಲ ನೋಟಿಸ್ ನೀಡಿ ನಾಟಕ ಮಾಡುತ್ತಿದ್ದಾರೆ. ರಾಮನಗರದ 35 ಸೂಕ್ಷ್ಮ ಮತಗಟ್ಟೆಗಳ ಎಸ್‌ಐಆರ್ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವೇ ಖುದ್ದಾಗಿ ಬಂದು ನಡೆಸಬೇಕು. ಎಲ್ಲಾ ವಿಡಿಯೋ ಸಾಕ್ಷ್ಯಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ ರಾಜ್ಯ ಚುನಾವಣಾ ಆಯೋಗ ಹಾಗೂ ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗುವುದು. ಅಗತ್ಯಬಿದ್ದರೆ ಪಶ್ಚಿಮ ಬಂಗಾಳದಂತೆ ಸೆಂಟ್ರಲ್ ಫೋರ್ಸ್ ತಂದು ಎಸ್‌ಐಆರ್ ನಡೆಸಲು ನಿಖಿಲ್ ಒತ್ತಾಯಿಸಿದರು.ಇದನ್ನೂ ಓದಿ: ಹುಸಿ ಬಾಂಬ್ ಕರೆಗಳು, ಇಮೇಲ್ ಪತ್ತೆ ಹಚ್ಚೋದು ಕಷ್ಟ- ಪ್ರಿಯಾಂಕ್ ಖರ್ಗೆ
