ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ತಮ್ಮ ಚೊಚ್ಚಲ ಭಾಷಣ ಮಾಡಿದ ನೇಪಾಳದ ಪ್ರಧಾನಿ ಬಾಲೆನ್ ಶಾ(Balen Shah) ಅವರು ಹಿಮಾಲಯ ಪ್ರದೇಶದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಭಾರತ, ಚೀನಾ ಮತ್ತು ನೇಪಾಳ ನೇತೃತ್ವದ ಜಂಟಿ ಹವಾಮಾನ ಕಾರ್ಯವಿಧಾನವನ್ನು ಪ್ರಸ್ತಾಪಿಸಿದ್ದಾರೆ.
ತಮ್ಮ ಎಂದಿನ ಸನ್‌ಗ್ಲಾಸ್ ಧರಿಸಿ ಭಾಷಣ ಮಾಡಿದ ರ್‍ಯಾಪರ್ ರಾಜಕಾರಣಿ ಬಾಲೆನ್ ಶಾ, ಹಿಮಾಲಯ ದೇಶಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಕಳೆದ ತಿಂಗಳು ಸಂಭವಿಸಿದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಹಿಮಾಲಯನ್ ಕ್ಲೈಮೇಟ್ ರೆಸಿಲಿಯನ್ಸ್ ಮೆಕ್ಯಾನಿಸಂ (Himalayan Climate Resilience Mechanism) ಸ್ಥಾಪಿಸುವಂತೆ ಕರೆ ನೀಡಿದರು. ಇದರ ಮೂಲಕ ಭಾರತ(India), ಚೀನಾ(China) ಮತ್ತು ನೇಪಾಳದ(Nepal) ನಡುವೆ ಉಪಗ್ರಹ ದತ್ತಾಂಶ ಹಂಚಿಕೆ (Satellite Data Sharing) ಮತ್ತು ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು (Early-warning systems) ಬಲಪಡಿಸಲು ಪ್ರಸ್ತಾಪಿಸಿದರು.
During his UNGA address, Nepal PM Balen Shah thanks India and China for providing prompt support after deadly flash floods. pic.twitter.com/YB6dZ73i4d
— Centre for Global India Insights (@CGIIthinktank) September 25, 2026
ಹಿಂದೂ ಕುಶ್ ಹಿಮಾಲಯ ಪ್ರದೇಶವು ಸುಮಾರು 200 ಕೋಟಿ ಜನರಿಗೆ ನೆಲೆಯಾಗಿದೆ. ಈ ಪರ್ವತಗಳು ನೇಪಾಳವನ್ನು ಮೀರಿ ದೂರದ ಜನಸಂಖ್ಯೆಗೂ ನೀರು, ಪರಿಸರ ವ್ಯವಸ್ಥೆ, ಕೃಷಿ ಮತ್ತು ಜೀವನೋಪಾಯವನ್ನು ಒದಗಿಸುತ್ತವೆ. ಆದ್ದರಿಂದ ತುರ್ತು ಮೊದಲ ಹೆಜ್ಜೆಯಾಗಿ ನಾವು ನೇಪಾಳ, ಭಾರತ ಮತ್ತು ಚೀನಾ ನೇತೃತ್ವದ ಹಿಮಾಲಯನ್ ಕ್ಲೈಮೇಟ್ ರೆಸಿಲಿಯನ್ಸ್ ಮೆಕ್ಯಾನಿಸಂ ಸ್ಥಾಪಿಸಲು ಪ್ರಸ್ತಾಪಿಸುತ್ತೇವೆ ಎಂದು ಶಾ ಹೇಳಿದರು. ಜುಲೈನಲ್ಲಿ ಸಂಭವಿಸಿದ ಪ್ರವಾಹಕ್ಕೆ ಕಾರಣವೆನ್ನಲಾದ ಅಪಾಯಕಾರಿ ಹಿಮನದಿ ಸರೋವರಗಳ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಹಕಾರವನ್ನೂ ಅವರು ಕೋರಿದರು.
ಆಗಸ್ಟ್ 26 ರಂದು ನೇಪಾಳ-ಟಿಬೆಟ್ ಗಡಿಯಲ್ಲಿ ಹಿಮನದಿ ಕುಸಿತದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 6,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ದುರಂತವು ಪಟ್ಟಣಗಳು, ರಸ್ತೆಗಳು ಮತ್ತು ಸೇತುವೆಗಳನ್ನೇ ಕೊಚ್ಚಿಹಾಕಿದೆ. ಈ ವಿನಾಶವನ್ನು ಉಲ್ಲೇಖಿಸಿದ ಅವರು, ಈ ವಿನಾಶವು ನೇಪಾಳ-ಚೀನಾ ಗಡಿಯ ಎರಡೂ ಬದಿಗಳಲ್ಲಿ ಹಾನಿ ಉಂಟುಮಾಡಿತು ಮತ್ತು ನಂತರ ಪ್ರವಾಹವು ಭಾರತದ ಕಡೆಗೂ ಹರಿಯಿತು. ಹವಾಮಾನ ಬದಲಾವಣೆಯು ಗಡಿಗಳನ್ನು ಗುರುತಿಸುವುದಿಲ್ಲ. ಹಿಮನದಿಗಳು ಮತ್ತು ಪ್ರವಾಹಗಳು ಪಾಸ್‌ಪೋರ್ಟ್ ಹಾಗೂ ಸೀಲುಗಳೊಂದಿಗೆ ಸಂಚರಿಸುವುದಿಲ್ಲ ಎಂದು ಹೇಳುವ ಮೂಲಕ ಜಗತ್ತಿಗೆ ಮಾರ್ಮಿಕ ಸಂದೇಶ ರವಾನಿಸಿದರು.
ದುರಂತದ ಸಮಯದಲ್ಲಿ ತಕ್ಷಣ ಸ್ಪಂದಿಸಿ ನೆರವು ನೀಡಿದ ಭಾರತ ಮತ್ತು ಚೀನಾ ದೇಶಗಳಿಗೆ ಬಾಲೆನ್ ಶಾ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದರು. ಚೀನಾ ನೇಪಾಳಕ್ಕೆ 2.2 ಮಿಲಿಯನ್ ಡಾಲರ್ ತುರ್ತು ಆರ್ಥಿಕ ನೆರವು ನೀಡಿದ್ದರೆ, ಭಾರತವು ಆಗಸ್ಟ್ 26 ರಿಂದ ಸೆಪ್ಟೆಂಬರ್ 19 ರ ಅವಧಿಯಲ್ಲಿ 140 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿ ಮತ್ತು ಸಲಕರಣೆಗಳನ್ನು ರವಾನಿಸಿತ್ತು.
ಕೆಲವು ದಿನಗಳ ಹಿಂದೆಯಷ್ಟೇ ನೇಪಾಳದ ವಿದೇಶಾಂಗ ಸಚಿವರು, ನೈಸರ್ಗಿಕ ವಿಕೋಪಗಳ ನಂತರ ನೇಪಾಳಕ್ಕೆ ನೀಡಲಾಗುವ ನೆರವು ಯಾವುದೇ ‘ದಾನ’ವಲ್ಲ. ಬದಲಾಗಿ ಭಾರತ ಮತ್ತು ಚೀನಾದಂತಹ ಹಸಿರುಮನೆ ಅನಿಲಗಳನ್ನು ಹೆಚ್ಚು ಹೊರಸೂಸುವ ದೇಶಗಳ ಕಾನೂನುಬದ್ಧ ಹಾಗೂ ನೈತಿಕ ಹೊಣೆಗಾರಿಕೆ ಎಂದು ಕಟುವಾಗಿ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಹೋಲಿಸಿದರೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪ್ರಧಾನಿ ಬಾಲೆನ್ ಶಾ ಅವರು ಭಾರತ ಮತ್ತು ಚೀನಾವನ್ನು ಒಗ್ಗೂಡಿಸಿಕೊಂಡು ಹೋಗಲು ಮುಂದಾಗಿರುವುದು ಅವರ ರಾಜತಾಂತ್ರಿಕ ನಿಲುವಿನಲ್ಲಿ ಕಂಡುಬಂದ ಮೃದು ಧೋರಣೆ ಎಂದು ವಿಶ್ಲೇಷಿಸಲಾಗುತ್ತಿದೆ.

