ಕಠ್ಮಂಡು: ನೇಪಾಳದಲ್ಲಿ (Nepal Flood) ಪ್ರವಾಹದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ರಸುವಾ ಸೇರಿದಂತೆ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿ ತಲುಪಿಸಲು ಕಠ್ಮಂಡುವಿನಿಂದ 40ಕ್ಕೂ ಹೆಚ್ಚು ಖಾಸಗಿ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.
ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ 40ಕ್ಕೂ ಹೆಚ್ಚು ಖಾಸಗಿ ಹೆಲಿಕಾಪ್ಟರ್‌ಗಳು ಪರಿಹಾರ ಸಾಮಗ್ರಿಗಳನ್ನು ಹೊತ್ತು ರಸುವಾ ಪ್ರದೇಶದತ್ತ ತೆರಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆಯನ್ನು ನೇಪಾಳ ಸೇನೆ ಸಂಘಟಿಸಿ ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿರುವ 14ನೇ ಬೆಟಾಲಿಯನ್, ಸಂಗ್ರಹಣಾ ಕೇಂದ್ರದಿಂದ ಹೆಲಿಕಾಪ್ಟರ್‌ಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದೆ.
ಮಧ್ಯಾಹ್ನ 2 ಗಂಟೆಯ ವೇಳೆಗೆ 40ಕ್ಕೂ ಹೆಚ್ಚು ಖಾಸಗಿ ಹೆಲಿಕಾಪ್ಟರ್‌ಗಳ ಚಾರ್ಟರ್ ಹಾರಾಟಗಳು ಪೂರ್ಣಗೊಂಡಿದ್ದವು. ಇನ್ನೂ 20ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿದ್ದವು ಎಂದು ವರದಿಯಾಗಿದೆ. ಇದರ ಜೊತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನೇಪಾಳ ಸೇನೆಯ ಹೆಲಿಕಾಪ್ಟರ್‌ಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸಂತ್ರಸ್ತರಿಗೆ ಅಗತ್ಯವಿರುವ ಪರಿಹಾರ ಸಾಮಗ್ರಿಗಳನ್ನು ಕೂಡ ಹೆಲಿಕಾಪ್ಟರ್‌ಗಳ ಮೂಲಕ ತಲುಪಿಸಲಾಗುತ್ತಿದೆ. ಇದನ್ನೂ ಓದಿ: ಮಣಿಪುರದಲ್ಲಿ ಬಂಡುಕೋರರ ಅಟ್ಟಹಾಸ – ವಾಹನದ ಮೇಲೆ ದಾಳಿ, ನಾಲ್ವರು ನಾಗರಿಕರು ಬಲಿ
ನೇಪಾಳದ ಮೂರು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹದಿಂದ ಭಾರೀ ಪ್ರಮಾಣದ ಹಾನಿಯಾಗಿದೆ. ಇದುವರೆಗೂ 93 ಶವಗಳು ಪತ್ತೆಯಾಗಿದ್ದು, ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಲವು ರಸ್ತೆಗಳು ಹಾಗೂ ಸಂಪರ್ಕ ವ್ಯವಸ್ಥೆಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ, ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿದೆ. ಸದ್ಯ ನೇಪಾಳದಲ್ಲಿ ಸಂತ್ರಸ್ತರ ರಕ್ಷಣೆಗೆ ಸೇನೆ ಹಾಗೂ ವಿವಿಧ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ. ಇದನ್ನೂ ಓದಿ: Nepal Flood Horror | ಕೈಲಾಸ ಯಾತ್ರೆಗೆ ತೆರಳಿದ್ದ ಧಾರವಾಡದ ವ್ಯಕ್ತಿ ನೇಪಾಳ ಪ್ರವಾಹದಲ್ಲಿ ನಾಪತ್ತೆ
