– ಕ್ಷಣಾರ್ಧದಲ್ಲಿ ಕೊಚ್ಚಿಹೋದ ಗ್ರಾಮಗಳು
– 8 ಸಾವು, 384 ಪ್ರವಾಸಿಗರು ಜಲಸಮಾಧಿ ಶಂಕೆ!
ಕಠ್ಮಂಡು: ಹಿಮಪರ್ವತಗಳ ಸುಂದರ ತಾಣ ನೇಪಾಳದಲ್ಲಿ (Nepal) ಪ್ರಕೃತಿ ಮುನಿದು ರುದ್ರನರ್ತನ ತೋರಿದೆ. ಹಿಮ ಮತ್ತು ಬಂಡೆಗಳು ಒಟ್ಟಾಗಿ ಅಪ್ಪಳಿಸಿದ ಹಿಮಕುಸಿತದ ಭೀಕರತೆಗೆ ಕ್ಷಣಮಾತ್ರದಲ್ಲಿ ಉಕ್ಕಿಹರಿದ ಹಠಾತ್ ಪ್ರವಾಹವು(Flash Flood) ಶಾಂತಿಯುತ ಹಳ್ಳಿಗಳನ್ನು, ಕನಸು ಹೊತ್ತು ಬಂದಿದ್ದ ನೂರಾರು ಮುಗ್ಧ ಜೀವಗಳನ್ನು ನುಂಗಿಹಾಕಿದೆ.
ಕಣ್ಣುಮುಚ್ಚಿ ತೆರೆಯುವುದರೊಳಗೆ ನೂರಾರು ಮನೆಗಳು, ರಸ್ತೆಗಳು ಜಲಸಮಾಧಿಯಾಗಿದೆ. ಪ್ರವಾಸದ ಸವಿನೆನಪು ಹೊತ್ತು ಸಾಗಬೇಕಿದ್ದ ಭಾರತ ಸೇರಿದಂತೆ ವಿವಿಧ ದೇಶಗಳ 384 ಪ್ರವಾಸಿಗರು ಪ್ರವಾಹದ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಪ್ರೀತಿಪಾತ್ರರ ರಕ್ಷಣೆಗಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಈ ಭೀಕರ ಪ್ರವಾಹದ ಪರಿಣಾಮವಾಗಿ ಭಾರತ, ಅಮೆರಿಕ, ಬ್ರಿಟನ್ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ 291 ವಿದೇಶಿಗರು ಒಳಗೊಂಡಂತೆ ಒಟ್ಟು 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ಭೋಟೆಕೋಶಿ ನದಿಯಲ್ಲಿ ಉಂಟಾದ ಪ್ರವಾಹವು ಹಲವು ಗ್ರಾಮಗಳು, ರಸ್ತೆಗಳು ಹಾಗೂ ಜಲವಿದ್ಯುತ್ ಯೋಜನೆಗಳನ್ನು ನಾಶಪಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನೇಪಾಳದ ಹಲವು ಜಿಲ್ಲೆಗಳ ಜನರಿಗೆ ಎಚ್ಚರಿಕೆ ನೀಡಿರುವ ಆಡಳಿತ, ಭೋಟೆಕೋಶಿ, ತ್ರಿಶೂಲಿ ಮತ್ತು ನಾರಾಯಣಿ ನದಿಗಳ ದಂಡೆಯಿಂದ ದೂರವಿರುವಂತೆ ಸೂಚಿಸಿದೆ.
This is seriously scary. CCTV footage from Gyirong Port in Tibet, China, directly opposite Nepal’s Rasuwa district. This flash flood hit here first and later caused massive havoc in Nepal. Can’t even imagine someone surviving this. Prayers for everyone affected. 🙏 https://t.co/o805P8KGSu pic.twitter.com/31QzZ64aBD
— Nikhil saini (@iNikhilsaini) August 26, 2026
ಅತ್ಯಂತ ತೀವ್ರವಾಗಿ ಹಾನಿಗೊಳಗಾದ ರಸುವಾ ಜಿಲ್ಲೆಯು ಕಳೆದ ವರ್ಷ ಆಗಸ್ಟ್‌ನಲ್ಲೂ ಇಂತಹದ್ದೇ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಆಗ ಪರ್ವತ ಪ್ರದೇಶದಲ್ಲಿ ಹೆಚ್ಚಿದ ತಾಪಮಾನದಿಂದಾಗಿ ನೆರೆಯ ಟಿಬೆಟ್‌ನಲ್ಲಿದ್ದ ಹಿಮನದಿ ಸರೋವರ ಉಕ್ಕಿ ಹರಿದು ಒಂಬತ್ತು ಮಂದಿ ಸಾವನ್ನಪ್ಪಿದ್ದರು ಹಾಗೂ ಉಭಯ ದೇಶಗಳನ್ನು ಸಂಪರ್ಕಿಸುವ ಸೇತುವೆ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದವು.
ಪ್ರವಾಹಕ್ಕೆ ಕಾರಣ ಏನು?
ಭೀಕರ ಹಠಾತ್ ಪ್ರವಾಹಕ್ಕೆ ಟಿಬೆಟ್(Tibet) ಗಡಿ ಭಾಗದಲ್ಲಿ ಉಂಟಾದ ಭೂಕಂಪ ಮತ್ತು ಅದರಿಂದ ನಡೆದ ಹಿಮಕುಸಿತವೇ ಮುಖ್ಯ ಕಾರಣವೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹಿಮ ಮತ್ತು ಬಂಡೆಗಳು ಕುಸಿದು ಅಲ್ಲಿನ ‘ಲ್ಹೆಂಡೆ ಖೋಲಾ’ (Lhende Khola) ನದಿಯ ಹರಿವನ್ನು ತಾತ್ಕಾಲಿಕವಾಗಿ ತಡೆದಿದ್ದವು. ಆ ಅಣೆಕಟ್ಟಿನಂತಹ ತಡೆಗೋಡೆ ನೀರಿನ ಒತ್ತಡಕ್ಕೆ ಒಮ್ಮೆಲೇ ಒಡೆದಾಗ ನೀರು ಮತ್ತು ಕೆಸರು ತೀವ್ರ ವೇಗದಲ್ಲಿ ಕೆಳಭಾಗದ ಭೋಟೆ ಕೋಶಿ ನದಿಗೆ ನುಗ್ಗಿ ಜಲಪ್ರಳಯ ಸೃಷ್ಟಿಸಿದೆ.
ಹಿಮಕುಸಿತವೇ ಬುಧವಾರದ ಈ ಹಠಾತ್ ಪ್ರವಾಹಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಕಠ್ಮಂಡು ಮೂಲದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್‌ನ (ICIMOD) ಹವಾಮಾನ ತಜ್ಞರು ತಿಳಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ (Climate Change) ಹಿಮಾಲಯದ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಇದರಿಂದಾಗಿ ಹಿಮದ ಸರೋವರಗಳು ತುಂಬಿ, ಅವುಗಳ ತಡೆಗೋಡೆಗಳು ಒಡೆದು ಹಠಾತ್ ಪ್ರವಾಹ ಇಡೀ ಹಳ್ಳಿಗಳನ್ನೇ ಕೊಚ್ಚಿಕೊಂಡು ಹೋಗಿದೆ. ಇದನ್ನೂ ಓದಿ: Nepal Flash Flood| 105 ಭಾರತೀಯರು ಸೇರಿ 400 ಮಂದಿ ನಾಪತ್ತೆ
ಕಠ್ಮಂಡು ಸೇರಿದಂತೆ ಪ್ರಮುಖ ಕಣಿವೆ ಪ್ರದೇಶಗಳಲ್ಲಿ ನದಿ ಪಾತ್ರಗಳನ್ನು ಅತಿಕ್ರಮಿಸಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮಣ್ಣಿನ ನೀರು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುವುದು ಮತ್ತು ಕಾಡುಗಳ ನಾಶದಿಂದಾಗಿ ಭೂಕುಸಿತಗಳು (Landslides) ಹೆಚ್ಚಾಗಿ ಪ್ರವಾಹದ ತೀವ್ರತೆ ದುಪ್ಪಟ್ಟಾಗುತ್ತಿದೆ.
ಕಳೆದ ಹದಿನಾಲ್ಕು ತಿಂಗಳುಗಳಲ್ಲಿ ಲ್ಹೆಂಡೆ ಖೋಲಾ ನದಿ ಎರಡು ಬಾರಿ ಉಕ್ಕಿ ಹರಿದಿದೆ. ಈ ಬಾರಿ ನೇಪಾಳದ ಕಡೆಯ ಹಿಮನದಿಯಿಂದ ಉಂಟಾದ ಹಿಮ-ಬಂಡೆ ಕುಸಿತವು ನದಿಯ ಹರಿವನ್ನು ತಡೆದು, ನಂತರ ಕೆಳಮುಖವಾಗಿ ಹಠಾತ್ ಭಾರೀ ನೀರನ್ನು ಹೊರಬಿಟ್ಟಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ನೇಪಾಳ, ಭಾರತ, ಟಿಬೆಟ್ ವ್ಯಾಪಿಸಿರುವ ಹಿಮಾಲಯ ಪ್ರದೇಶವು ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಗೆ ತುತ್ತಾಗುವ ಸೂಕ್ಷ್ಮ ವಲಯವಾಗಿದೆ. ಮಾನವ ನಿರ್ಮಿತ ಹವಾಮಾನ ಬದಲಾವಣೆಯಿಂದಾಗಿ ಈ ಪ್ರದೇಶವು ಜಾಗತಿಕ ಸರಾಸರಿಗಿಂತ ವೇಗವಾಗಿ ಬಿಸಿಯಾಗುತ್ತಿದ್ದು, ಹೀಟ್‌ವೇವ್‌ಗಳು, ಅತಿಯಾದ ಮಳೆ ಹಾಗೂ ಹಿಮನದಿಗಳು ಕರಗುವಂತಹ ತೀವ್ರ ಹವಾಮಾನ ವೈಪರೀತ್ಯಗಳ ಪ್ರಮಾಣ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತಿದೆ. ಹಿಂದೂ ಕುಶ್ ಹಿಮಾಲಯದಾದ್ಯಂತ ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂದು ಈ ವರ್ಷದ ಆರಂಭದಲ್ಲಿ ಕಠ್ಮಂಡು ಮೂಲದ ಸಂಶೋಧಕರು ವರದಿ ಮಾಡಿದ್ದರು.
