– ತಡವಾಗಿ ಬಂದವರಿಗೆ ತಪ್ಪಿದ ಪರೀಕ್ಷೆ
ನವದೆಹಲಿ: ಇಂದು ದೇಶಾದ್ಯಂತ ನೀಟ್ ಮರುಪರೀಕ್ಷೆ (NEET Re-Exam) ಸುಸೂತ್ರವಾಗಿ ನಡೀತು. ದೇಶದ ಇತಿಹಾಸದಲ್ಲೇ ಮಿಲಿಟರಿ ಭದ್ರತೆಯಲ್ಲಿ ನೀಟ್ ಮರುಪರೀಕ್ಷೆ ನಡೆಸಲಾಯಿತು. ಸುಮಾರು 22.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದರು.
ನೀಟ್ ಸೆಂಟರ್‌ಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಟ್ಟೆಚ್ಚರ ವಹಿಸಲಾಗಿತ್ತು. ಮೇ 3ರಂದು ನಡೆದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಇಂದು ಮತ್ತೆ ದೇಶಾದ್ಯಂತ 551 ನಗರಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಯ್ತು. ಈ ಬಾರಿ 15 ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಬೆಂಗಳೂರಲ್ಲಿ ಒಟ್ಟು 68 ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರದಿಂದ ಪರೀಕ್ಷೆ ನಡೆಸಲಾಯ್ತು. ಬ್ಯಾಂಕ್ ಲಾಕರ್‌ಗಳಲ್ಲಿ ಪ್ರಶ್ನೆಪತ್ರಿಕೆ ಇರಿಸಲಾಗಿತ್ತು. ಪರೀಕ್ಷೆ ಆರಂಭವಾಗುವ ಕೆಲ ಹೊತ್ತುಗಳ ಹಿಂದೆ ಹೈಸೆಕ್ಯುರಿಟಿ ಮೂಲಕ ಪರೀಕ್ಷಾ ಕೇಂದ್ರಕ್ಕೆ ತಂದಿರಿಸಲಾಯ್ತು. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿತ್ತು. ಜೊತೆಗೆ ಪರೀಕ್ಷಾ ಕೇಂದ್ರದ ಸುತ್ತಲೂ ಜಾಮರ್‌ಗಳನ್ನ ಹಾಕುವುದರ ಮೂಲಕ ಯಾವುದೇ ಅಕ್ರಮ ನಡೆಯದಂತೆ ಎಚ್ಚರವಹಿಸಲಾಯ್ತು. ವಸ್ತ್ರಸಂಹಿತೆಯನ್ನೂ ಪಾಲಿಸಲಾಯ್ತು. ಇದನ್ನೂ ಓದಿ: ತಡವಾಗಿ ಬಂದ ಕಾರಣ ನೀಟ್ ಪರೀಕ್ಷೆಗೆ ನೋ ಎಂಟ್ರಿ; ಕಣ್ಣೀರಿಟ್ಟ ವಿದ್ಯಾರ್ಥಿನಿಯರು
ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧ ಹೇರಲಾಗಿತ್ತು. ನೀಟ್ ಅಭ್ಯರ್ಥಿಗಳಿಗೆ ಅಡಚಣೆ ಆಗಬಾರದು ಅಂತ ಪ್ರಧಾನಿ ಮೋದಿ ಅವರು ದೆಹಲಿ ಏರ್‌ಪೋರ್ಟ್ ಒಳಗಡೆಯೇ 45 ನಿಮಿಷ ಕಾದ ಪ್ರಸಂಗ ಕೂಡ ನಡೆಯಿತು. ಬೆಂಗಳೂರಷ್ಟೇ ಅಲ್ಲ ಜಿಲ್ಲೆ ಜಿಲ್ಲೆಗಲ್ಲೂ ನೀಟ್ ಸುಸೂತ್ರವಾಗಿ ನಡೆಯಲು ಕ್ರಮ ವಹಿಸಲಾಗಿತ್ತು. ಮಲ್ಲೇಶ್ವರದಲ್ಲಿ ಜೀನ್ಸ್ ಪ್ಯಾಂಟ್ ಧರಿಸಿ ಬಂದ ಕಾರಣ, ವಿದ್ಯಾರ್ಥಿಯ ಬಟನ್ ಕಟ್ ಮಾಡಲಾಯಿತು. ಕಪ್ಪುದಾರ ತೆಗೆಸಿದ್ದಕ್ಕೆ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಗೇಟ್ ಬಂದ್ ಮಾಡಿದ ನಂತರ ಓಡಿ ಬಂದ ವಿದ್ಯಾರ್ಥಿಗೆ ಕೊನೆ ಕ್ಷಣದಲ್ಲಿ ಅವಕಾಶ ಕಲ್ಪಿಸಲಾಯಿತು. ಟ್ರಾಫಿಕ್ ಜಾಮ್‌ನಿಂದ ಬಸ್ ತಡವಾಗಿ ಬಂದ ಮೂವರು ವಿದ್ಯಾರ್ಥಿಗಳಿಗೆ ಆರ್‌ಸಿ ಕಾಲೇಜ್‌ನಲ್ಲಿ ಅವಕಾಶ ಕೊಡ್ಲಿಲ್ಲ. ಹಾಗಾಗಿ, ಗೇಟ್ ಬಳಿಯೇ ಪೋಷಕರು ಕೂಗಾಡಿದರು. ಬಳ್ಳಾರಿಯಲ್ಲಿ ಉಡುದಾರಕ್ಕೂ ಅವಕಾಶ ಕೊಡದ ಕಾರಣ ವಿದ್ಯಾರ್ಥಿಗಳು ತಾವೇ ಉಡುದಾರಕ್ಕೆ ಕತ್ತರಿ ಹಾಕಿದರು. ಕೊಪ್ಪಳದಲ್ಲಿ 1:30ರ ನಂತರ ಬಂದ ಫಾತಿಮಾ ಎಂಬಾಕೆಗೆ ಪರೀಕ್ಷೆಗೆ ಅವಕಾಶ ಸಿಗ್ಲಿಲ್ಲ. ವಿದ್ಯಾರ್ಥಿನಿ ಪರಿಪರಿಯಾಗಿ ಬೇಡಿಕೊಂಡರೂ ನಿರಾಕರಿಸಲಾಯಿತು.
