ಬೆಂಗಳೂರು: ಪ್ರತಿಭೆಗೆ ಸಾಣೆ ಹಿಡಿಯುವ, ಸಂಶೋಧನೆಗೆ ಒತ್ತು ನೀಡುವ, ನವೋದ್ಯಮಗಳಿಗೆ ಬೆಂಬಲ, ಆಡಳಿತದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಜಾಣ ಆಡಳಿತ (ಐ-ಜಿ) -ಎಂಬ 5 ಪ್ರಮುಖ ಅಡಿಪಾಯಗಳ ಮೇಲೆ ರಾಜ್ಯದಲ್ಲಿನ ಡೀಪ್‌ಟೆಕ್ (DeepTech) ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ತಿಳಿಸಿದರು.
ಸಾಫ್ಟ್‌ವೇರ್ ಹಾಗೂ ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟವು (ನಾಸ್ಕಾಂ) ಗುರುವಾರ ನಗರದಲ್ಲಿ ಆಯೋಜಿಸಿದ್ದ ‘ಫ್ಯೂಚರ್ ಫೋರ್ಜ್ – ಚಾರ್ಟಿಂಗ್ ಇಂಡಿಯಾಸ್ ಡೀಪ್‌ಟೆಕ್ ಆರ್ಕಿಟೆಕ್ಚರ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Delivered the inaugural address at the International Conference on “Leveraging Artificial Intelligence to Advance Sustainable Development Goals,” organised by the Wolverhampton-Bengaluru Centre for Research and Innovation, a collaboration involving Dr. Manmohan Singh Bengaluru… pic.twitter.com/sG1q1wlUlw
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 6, 2026
ಸರ್ಕಾರ ಕೈಗಾರಿಕೆ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಣ ನಿಕಟ ಸಹಭಾಗಿತ್ವವೇ ಕರ್ನಾಟಕವನ್ನ ದೇಶದ ಪ್ರಮುಖ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಿದ್ದು, ಇದೇ ಮಾದರಿ ಆಧರಿಸಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ಮಷಿನ್ ಲರ್ನಿಂಗ್-ಎಂಎಲ್), ರೋಬೊಟ್ ವಿಜ್ಞಾನ (ರೋಬೊಟಿಕ್ಸ್), ಕ್ವಾಂಟಮ್ ಕಂಪ್ಯೂಟಿಂಗ್ (ಕ್ಯುಸಿ) ಮತ್ತು ಜೈವಿಕ ತಂತ್ರಜ್ಞಾನದಂತಹ (ಬಿಟಿ) ಅತ್ಯಾಧುನಿಕ ಹಾಗೂ ಸುಧಾರಿತ ತಂತ್ರಜ್ಞಾನ (ಡೀಪ್‌ಟೆಕ್) ಕ್ಷೇತ್ರವನ್ನ ಬಲಪಡಿಸಲಾಗುವುದುʼ ಎಂದರು.
ನಿಪುಣ ಕರ್ನಾಟಕ ಯೋಜನೆಯ ಮೂಲಕ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ತಯಾರಿಕೆ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಕೌಶಲ ಹಾಗೂ ಪ್ರತಿಭೆ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ. ಕೈಗಾರಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ರಾಜ್ಯದ 20ಕ್ಕೂ ಹೆಚ್ಚು ಶ್ರೇಷ್ಠತಾ ಕೇಂದ್ರಗಳು ಸಂಶೋಧನೆಯನ್ನ ವಾಣಿಜ್ಯ ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದುವರೆಗೆ 1,000 ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳು (IP) ಸೃಷ್ಟಿಯಾಗಿವೆ.

ʻಎಲೆವೇಟ್ ಹಾಗೂ ಎಲೆವೇಟ್ ನೆಕ್ಸ್ಟ್ ಯೋಜನೆಗಳ ಮೂಲಕ 1,500 ನವೋದ್ಯಮಗಳಿಗೆ ಅನುದಾನ ನೀಡಲಾಗಿದ್ದು, ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ 1 ಕೋಟಿ ರೂ.ವರೆಗೆ ನೆರವು ನೀಡಿ, ಮಾರ್ಗದರ್ಶನ ಹಾಗೂ ಜಾಗತಿಕ ಮಾರುಕಟ್ಟೆಗಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಸರ್ಕಾರವೂ ಹೊಸ ತಂತ್ರಜ್ಞಾನಗಳ ಮೊದಲ ಬಳಕೆದಾರನಾಗುವ ‘ಗವರ್ನ್‌ರ್ಮೆಂಟ್ ಫಸ್ಟ್’ ಪರಿಕಲ್ಪನೆಯಡಿ ಆರೋಗ್ಯ, ಕೃಷಿ, ನಗರಾಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಪರಿಹಾರಗಳನ್ನು ಪ್ರಯೋಗಾತ್ಮಕವಾಗಿ ಅಳವಡಿಸಿಕೊಳ್ಳುತ್ತಿದೆ.
ಈ ಎಲ್ಲ ಪ್ರಯತ್ನಗಳಿಗೆ ಪೂರಕವಾಗಿ, ಇ-ಆಡಳಿತದಿಂದ ಜಾಣ ಆಡಳಿತ (ಐ-ಜಿ) ವ್ಯವಸ್ಥೆಯತ್ತ ರಾಜ್ಯ ಸಾಗುತ್ತಿದ್ದು, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ, ದಕ್ಷ ರೀತಿಯಲ್ಲಿ ಒದಗಿಸಲು ಉದ್ದೇಶಿಸಲಾಗಿದೆ. ಪರಿಸರ ಸ್ನೇಹಿ ಡೇಟಾ ಸೆಂಟರ್‌ಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ ರೂಪುಗೊಳ್ಳುವ ಡೀಪ್‌ಟೆಕ್ ತಂತ್ರಜ್ಞಾನಗಳು ರಾಜ್ಯಕ್ಕಷ್ಟೇ ಅಲ್ಲದೆ, ದೇಶದ ಮತ್ತು ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು ಎಂಬುದು ನಮ್ಮ ಹೆಬ್ಬಯಕೆಯಾಗಿದೆʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.



