– ದ್ವಂದ್ವ ನೀತಿಗೆ ಡಿಎಂಕೆ ಆಕ್ರೋಶ
ಚೆನ್ನೈ: ತಮಿಳುನಾಡಿನಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೌನವನ್ನು ಪ್ರಶ್ನಿಸಿ ಪ್ರತಿಪಕ್ಷ ಡಿಎಂಕೆ ಟೀಕಿಸಿದೆ.
ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ಅವರು ಎಕ್ಸ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ INDIA ಮೈತ್ರಿಕೂಟದ ನಾಯಕರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಮರುದಿನವೇ ಡಿಎಂಕೆಯ ಈ ತೀಕ್ಷ್ಣ ಪ್ರತಿಕ್ರಿಯೆ ಹೊರಬಿದ್ದಿದೆ.
ಚುನಾವಣಾ ಆಯೋಗದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ, ತಮಿಳುನಾಡಿನಲ್ಲಿ ನಡೆದಿರುವ ಲಕ್ಷಾಂತರ ಮತದಾರರ ಹೆಸರಿನ ಅಳಿಸುವಿಕೆ ಕುರಿತು ದೇಶವ್ಯಾಪಿ ಧ್ವನಿ ಎತ್ತುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯ ನಂತರ ರಚನೆಯಾದ ಎಲ್ಲಾ ರಾಜ್ಯ ಸರ್ಕಾರಗಳನ್ನು ವಿಸರ್ಜಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯನ್ನು ರಾಹುಲ್ ಗಾಂಧಿ ಇದುವರೆಗೂ ಬಹಿರಂಗವಾಗಿ ಏಕೆ ಬೆಂಬಲಿಸಿಲ್ಲ ಎಂದು ಅಣ್ಣಾದೊರೈ ಕೇಳಿದ್ದಾರೆ.
ವಿಜಯ್ಗೆ ಹೆದರಿಕೊಂಡಿರುವ ರಾಹುಲ್ ತಮಿಳುನಾಡಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಕಪಟಿ ಎಂದು ಕರೆದಿರುವ ಅಣ್ಣಾದೊರೈ, ಒಮ್ಮೆ ವಂಚಿಸಿದವನು ಯಾವಾಗಲೂ ವಂಚಕನೇ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಮತ ಕಳವು ಮಾಡಲಾಗಿದೆ ಎಂದು ಅಬ್ಬರಿಸುತ್ತಿರುವ ರಾಹುಲ್ ಗಾಂಧಿ, ತಮಿಳುನಾಡಿನಲ್ಲಿ ನಡೆದಿರುವ ಮತದಾರರ ಪಟ್ಟಿ ತಿರುಚುವಿಕೆಯ ಗೊಂದಲದ ಬಗ್ಗೆ ಕನಿಷ್ಠ ಒಂದು ಮಾತನ್ನಾದರೂ ಯಾಕೆ ಆಡುತ್ತಿಲ್ಲ? ತಮಿಳುನಾಡಿನಲ್ಲಿ 20,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾದ 135 ಕ್ಷೇತ್ರಗಳ ಪೈಕಿ 84 ಕ್ಷೇತ್ರಗಳಲ್ಲಿ ಟಿವಿಕೆ ಜಯಭೇರಿ ಬಾರಿಸಿದೆ. 80,000ಕ್ಕೂ ಹೆಚ್ಚು ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಲಾದ ಎಲ್ಲಾ 10 ಕ್ಷೇತ್ರಗಳಲ್ಲೂ ಟಿವಿಕೆಯೇ ಗೆಲುವು ಸಾಧಿಸಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: CEC ನೇಮಕಾತಿ ಕಾಯ್ದೆ: ವಿಭಜಿತ ತೀರ್ಪು ಹಿಂಪಡೆಯಲು ಅರ್ಜಿ – ಪರಿಶೀಲಿಸುವ ಭರವಸೆ ನೀಡಿದ ಸಿಜೆಐ
ತಮಿಳುನಾಡಿನಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ಯಾವುದೇ ವ್ಯತ್ಯಯವಾಗಿಲ್ಲವೇ? ಟಿವಿಕೆಯ ಈ ಗೆಲುವಿಗೂ ಎಸ್ಐಆರ್ ಮತ ಅಳಿಸುವಿಕೆಗೂ ಯಾವುದೇ ಸಂಬಂಧವಿಲ್ಲವೇ? ತಮಿಳುನಾಡು ವಿಚಾರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದಾರೆಯೇ? ಅಥವಾ ಈ ಎಸ್ಐಆರ್ ಪ್ರಕ್ರಿಯೆಯಿಂದ ಡಿಎಂಕೆಗೆ ತೀವ್ರ ಹಿನ್ನಡೆಯಾಯಿತೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮೈತ್ರಿ ಕಡಿತ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ದಶಕಗಳ ಸುದೀರ್ಘ ಮೈತ್ರಿ ಸಂಪೂರ್ಣವಾಗಿ ಮುರಿದುಬಿದ್ದಿತ್ತು. ಕಾಂಗ್ರೆಸ್ ತನ್ನ ಹಳೆಯ ಮಿತ್ರಪಕ್ಷವಾದ ಡಿಎಂಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡು, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೆಂಬಲ ನೀಡಿತ್ತು.
ಅಂದಿನಿಂದ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಡಿಎಂಕೆ INDIA ಒಕ್ಕೂಟದಲ್ಲಿದ್ದರೂ ಮಂಗಳವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಂಸದರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿರಲಿಲ್ಲ.ಇದನ್ನೂ ಓದಿ: ಮಕ್ಕಳಾಗದ ವಿಚಾರಕ್ಕೆ ಗಲಾಟೆ; ತವರಿನಿಂದ ಹಣ ತರಲು ನಿರಾಕರಿಸಿದ ಪತ್ನಿಯನ್ನೇ ಕೊಲೆಗೈದ ಪತಿ

