– ನೊಬೆಲ್ ಶಾಂತಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಟ್ರಂಪ್‌ಗೆ ಮತ್ತೆ ಶಾಕ್
– ನೆಲ್ಸನ್ ಮಂಡೇಲಾ ಪರ ವಕೀಲರಾಗಿ ಕೆಲಸ ಮಾಡಿದ್ದ ಪಿಳ್ಳೈ
ವಾಷಿಂಗ್ಟನ್: ಭಾರತೀಯ ಮೂಲದ ನವನೆಥೆಮ್ ನವಿ ಪಿಳ್ಳೈ (Navanethem Navi Pillay) ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize 2026) ಲಭಿಸಿದೆ. ಇದರಿಂದ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೆ ಶಾಕ್ ಆಗಿದೆ.
ಕಳೆದ ವರ್ಷ ಕೂಡ ಡೊನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದರು. ಆದ್ರೆ, 2025ರ ನೊಬೆಲ್ ಶಾಂತಿ ಪ್ರಶಸ್ತಿ ವೆನೆಜುವೆಲಾದ ಹೋರಾಟಾರ್ತಿ ಮಾರಿಯಾ ಕೊರಿನಾ ಮಚಾದೋ (María Corina Machado) ಅವರಿಗೆ ಲಭಿಸಿತ್ತು. ಆದ್ರೆ ಆ ಪ್ರಶಸ್ತಿಯನ್ನ ಮಚಾದೋ ಟ್ರಂಪ್ ಅವರಿಗೇ ಅರ್ಪಿಸಿದ್ದರು.

ಈ ಬಾರಿ ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸಲು ಅವರು ನೀಡಿದ ಕೊಡುಗೆಯನ್ನ ಗುರುತಿಸಿ ಶುಕ್ರವಾರ (ಇಂದು) ಪ್ರಶಸ್ತಿ ನೀಡಲಾಗಿದೆ. ನವಿ ಪಿಳ್ಳೈ ಸದ್ಯ ದಕ್ಷಿಣ ಆಫ್ರಿಕಾದಲ್ಲಿ (South Africa) ಮಾನವ ಹಕ್ಕುಗಳ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾರ್ವೇಜಿಯನ್ ನೊಬೆಲ್ ಸಮಿತಿ (Nobel Committee) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪಿಳ್ಳೈ ಅವರು ಸರ್ಕಾರಗಳು ಮತ್ತು ರಾಷ್ಟ್ರೀಯ ನಾಯಕರನ್ನು ಅವರ ಹೊಣೆಗಾರಿಕೆಗೆ ಒಳಪಡಿಸಿದ್ದಾರೆ. ಹಿಂಸಾಚಾರ ಮತ್ತು ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ವ್ಯಕ್ತಿಗಳು ಮತ್ತು ಸರ್ಕಾರಗಳು ಕಾನೂನಿನ ನಿಯಮಗಳನ್ನ ಪಾಲಿಸುವ ಜವಾಬ್ದಾರಿ ಹೊಂದಿವೆ ಎಂಬುದನ್ನ ಪಿಳ್ಳೈ ಅವರು ಸದಾ ಒತ್ತಿ ಹೇಳುತ್ತಾ ಬಂದಿದ್ದಾರೆ.
BREAKING NEWS
The Norwegian Nobel Committee has decided to award the 2026 #NobelPeacePrize to Navanethem “Navi” Pillay for her efforts to promote peace and international law.#NobelPrize https://t.co/97vurspw6z
— The Nobel Prize (@NobelPrize) October 9, 2026
ಕಾನೂನು ತತ್ವಗಳ ಮೇಲೆ ಪಿಳ್ಳೈ ಅವರ ಬದ್ಧತೆ ಮತ್ತು ಅವರ ದೃಢವಾದ ನೈತಿಕ ನಿಲುವು ಅವರ ಸುದೀರ್ಘ ವೃತ್ತಿಜೀವನದಲ್ಲಿ ನಿರಂತರವಾಗಿ ಕಾಣಿಸಿಕೊಂಡಿದೆ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಹೇಳಿದೆ.
ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾ ಸೇರಿದಂತೆ ಹಲವರ ಪರವಾಗಿ ವಕೀಲರಾಗಿ ಕೆಲಸ ಮಾಡಿದ ಆರಂಭಿಕ ದಿನಗಳಿಂದ ಹಿಡಿದು, ಇತ್ತೀಚಿನ ಪ್ರಮುಖ ಅಂತಾರಾಷ್ಟ್ರೀಯ ನ್ಯಾಯಾಲಯದ ಪ್ರಕರಣಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದವರೆಗಿನ ಅವರ ವೃತ್ತಿಜೀವನದಲ್ಲಿ ಕಾನೂನು ಮತ್ತು ನ್ಯಾಯದ ಪರವಾದ ನಿಲುವು ಪ್ರಮುಖವಾಗಿ ಕಾಣಿಸುತ್ತದೆ ಎಂದು ಸಮಿತಿ ಶ್ಲಾಘಿಸಿದೆ.

