ಗೀತ ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರ್ತಿ 3 ದಶಕಗಳಾಗಿವೆ. ಈವರೆಗೂ ಸಾವಿರಾರು ಹಾಡುಗಳನ್ನು ಬರೆದು ಫೇಮಸ್ ಆಗಿದ್ದಾರೆ ವಿ ನಾಗೇಂದ್ರ ಪ್ರಸಾದ್. ಹಾಡುಗಳನ್ನು ಬರೆಯುವುದರ ಜತೆಗೆ ನಿರ್ದೇಶನ, ನಟನೆ, ಸಂಭಾಷಣೆ, ಸಂಗೀತ ನಿರ್ದೇಶನದ ವಿಭಾಗದಲ್ಲೂ ಅವರು ಕೆಲಸ ಮಾಡಿದ್ದಾರೆ. ಅವರು ತಮ್ಮ ವೃತ್ತಿ ಬದುಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹಾಡು ಬರೆದಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಗೌರವಿಸಿ ಅವರ 50ನೇ ಹುಟ್ಟುಹಬ್ಬದ ನೆಪವಾಗಿಸಿಕೊಂಡು ಕವಿರತ್ನ ಸಾರ್ಥಕ ಸುವರ್ಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕುರಿತ ಸುದ್ದಿಗೋಷ್ಟಿಯನ್ನು ಇಂದು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನಗೆ ಕವಿ ರತ್ನ ಎಂಬ ಬಿರುದು ಕೊಟ್ಟರು. ಅದು ಹಾಗೇ ಸಿನಿಮಾಗಳಲ್ಲಿ ಟ್ರಾವೆಲ್ ಆಗ್ತಾ ಬಂದು. ಈಗ ಕವಿರತ್ನ ಸಾರ್ಥಕ ಸುವರ್ಣ ಕಾರ್ಯಕ್ರಮ ಹಂತಕ್ಕೆ ಬಂದಿದೆ. ವೀರ ಲೋಕ ಪ್ರಕಾಶನ, ವಿಷ್ಣು ಸೇನಾ ಸಮಿತಿ, ರಾಕ್ ಲೈನ್ ವೆಂಕಟೇಶ್ ಅವರು, ಒಂದಷ್ಟು ಎಫ್ ಎಂಗಳು, ಆಡಿಯೋ ಕಂಪನಿಗಳು ಈ ಕಾರ್ಯಕ್ರಮಕ್ಕೆ ಖುಷಿಯಿಂದ ಜೊತೆಯಾಗುತ್ತಿದ್ದಾವೆ. ಈ ಕಾರ್ಯಕ್ರಮ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಭಾಗಿಯಾಗುತ್ತಿದ್ದಾರೆ. ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಾರ್ಮಿಕರು ಬರ್ತಿದ್ದಾರೆ. ಇದೊಂದು ದೊಡ್ಡ ಸಂಭ್ರಮ. ಈ ಸಂಭ್ರಮಕ್ಕೆ ನಿಮ್ಮ ಸಹಕಾರ ಇರಲಿ ಎಂದರು.
ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಕಾರ್ಯಕ್ರಮ ಆಗಿರಲಿಲ್ಲ. ಬೇರೆ ಭಾಷೆಗಳಲ್ಲಿ ಸಾಹಿತ್ಯ ಹಾಗೂ ಸಾಹಿತಿಗಳನ್ನು ಗೌರವಿಸುವ ಕೆಲಸ ಬಹಳ ದೊಡ್ಡ ಮಟ್ಟದಲ್ಲಿ ಆಗುತ್ತದೆ. ನಮ್ಮಲ್ಲಿ ಈ ರೀತಿ ಒಗ್ಗೂಡಿ ಸಂಭ್ರಮಿಸುವ ಕ್ಷಣಗಳು ಕಡಿಮೆ ದಾಖಲಾಗಿವೆ.ಹೀಗಾಗಿ ಈ ಕಾರ್ಯಕ್ರಮ ಮಹತ್ವ ಪಡೆದಿದೆ. ಕನ್ನಡ ಚಿತ್ರರಂಗವನ್ನು ಮೂರು ದಶಕಗಳ ಕಾಲ ತಮ್ಮ ಹಾಡುಗಳ ಮೂಲಕ ಬೆಳಗಿದ ವಿ.ನಾಗೇಂದ್ರ ಪ್ರಸಾದ್ ಅವರ ಸಿನಿಜರ್ನಿಯ ಸಂಭ್ರಮಾಚರಣೆ. ಸಾವಿರ ಸಿನಿಮಾಗಳಿಗೆ ಅವರು ಹಾಡು ಬರೆದಿದ್ದಾರೆ. ಆ ಸಾವಿರ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಕಲಾವಿದರು ಹಾಗೂ ಕಾರ್ಮಿಕರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಲವ್ಲಿ ಸ್ಟಾರ್ ಪ್ರೇಮ್ ಮಾತನಾಡಿ, ಸ್ಟಾರ್ಸ್ ಗಳ ಮೆರವಣಿಗೆ ನಿಂತಿರುವುದು ಇವರ ಬರವಣಿಗೆಯಲ್ಲಿ. ನಮ್ಮ ಚಿತ್ರರಂಗದಲ್ಲಿ ಮೆರವಣಿಗೆ ಮೊದಲು ಎಂಬಂತಿದೆ. ಬೇರೆ ಭಾಷೆಗಳಲ್ಲಿ ಯಾರ್ ಯಾರಿಗೋ ಪದ್ಮಪ್ರಶಸ್ತಿ ಸಿಕ್ಕಿದೆ. ಅದು ಅವರ ಯೋಗ ಹಾಗೂ ಯೋಗ್ಯತೆಗೆ ಸಿಕ್ಕಿದೆ. ಆದರೆ ನಮ್ಮ ಚಿತ್ರರಂಗದಲ್ಲಿ 3000 ಹಾಡು ಬರೆದವರಿಗೆ ಹಾಗೂ 300 ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಮಾಡಿದ ಹಂಸಲೇಖ ಅವರಿಗೆ ಪದ್ಮಶ್ರೀ ದೊರಕದೆ ಇರುವುದು ಶೋಚನೀಯ. ನಮ್ಮ ಚಿತ್ರರಂಗದಲ್ಲಿ ಸಾಹಿತ್ಯ ಶ್ರೀಮಂತವಾಗಿದೆ. ಈ ಸಾಹಿತ್ಯ ಶ್ರೀಮಂತಗೊಳಿಸಿದವರಿಗೆ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು. “ಕವಿರತ್ನ ಸಾರ್ಥಕ ಸುವರ್ಣ” ಕಾರ್ಯಕ್ರಮವನ್ನು 2026ರ ಜುಲೈ 19ರಂದು ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಬೆಂಗಳೂರಿನಲ್ಲಿ ಅತ್ಯಂತ ವೈಭವದಿಂದ ಆಯೋಜಿಸಲಾಗಿದೆ.
ಅವರ ಜನ್ಮದ 50ನೇ ವರ್ಷವನ್ನು ನೆಪವಾಗಿಸಿಕೊಂಡು, ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಅಪಾರ ಕೊಡುಗೆಯನ್ನು ಗೌರವಿಸುವುದು ಹಾಗೂ ಅವರು ರಚಿಸಿರುವ 3,000ಕ್ಕೂ ಹೆಚ್ಚು ಹಾಡುಗಳ ಸಂಭ್ರಮವನ್ನು ಆಚರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸುಮಾರು 1,000ಕ್ಕೂ ಹೆಚ್ಚು ನಟರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಗಾಯಕ-ಗಾಯಕಿಯರು, ತಂತ್ರಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೆ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿ ಹಾಗೂ ಅನೇಕ ಗಣ್ಯರು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮದ ವಿಶೇಷವಾಗಿ 100ಕ್ಕೂ ಹೆಚ್ಚು ನಾಗೇಂದ್ರ ಪ್ರಸಾದ್ ಅವರ ಗೀತೆಗಳನ್ನು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಾಯಕ-ಗಾಯಕಿಯರು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಹಂಸಲೇಖ, ಅರ್ಜುನ್ ಜನ್ಯ, ವಿ. ಹರಿಕೃಷ್ಣ, ವಿ. ಮನೋಹರ್, ಶ್ರೀಧರ್ ಸಂಭ್ರಮ, ಗುರುಕಿರಣ್, ಕೆ. ಕಲ್ಯಾಣ್, ಕವಿರಾಜ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರು ಮತ್ತು ಸಾಹಿತಿಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
