ಚೆನ್ನೈ: ಪಕ್ಷದ ಸಂಘಟನೆಯಲ್ಲಿ ಹೊಸ ತಲೆಮಾರಿನ ನಾಯಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಡಿಎಂಕೆ (DMK) ಮಹತ್ವದ ಸಂಘಟನಾ ಬದಲಾವಣೆಗಳನ್ನು ಘೋಷಿಸಿದೆ.
ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿವಿಧ ಹಂತಗಳ ಪದಾಧಿಕಾರಿಗಳ ವಯಸ್ಸು ಹಾಗೂ ಅಧಿಕಾರಾವಧಿಗೆ ಮಿತಿ ನಿಗದಿಪಡಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇದನ್ನೂ ಓದಿ: ʻಮೀಸಲಾತಿ ಹಠಾವೋ ಆಂದೋಲನʼ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರ ಒಪ್ಪಿದೆ – ಪ್ರತಿಭಟನಾಕಾರರ ಹೇಳಿಕೆ
ಡಿಎಂಕೆ ಸಂಘಟನೆಯ ಪುನರ್‌ರಚನೆಯ ಭಾಗವಾಗಿ ಬಹುತೇಕ ಹುದ್ದೆಗಳಿಗೆ ಗರಿಷ್ಠ ಎರಡು ಅವಧಿ ಮಿತಿ ನಿಗದಿಪಡಿಸಲಾಗಿದೆ. ಇದರಿಂದ ದೀರ್ಘಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುವ ಪದ್ಧತಿಗೆ ಕಡಿವಾಣ ಹಾಕಿ, ಯುವ ನಾಯಕರಿಗೆ ಅವಕಾಶ ನೀಡುವ ಉದ್ದೇಶ ಪಕ್ಷದ್ದಾಗಿದೆ.ಶಾಖಾ ಸಮಿತಿ ಕಾರ್ಯದರ್ಶಿ ಹುದ್ದೆಗೆ ಗರಿಷ್ಠ ವಯಸ್ಸು 45 ವರ್ಷವಾಗಿದ್ದು, ಗರಿಷ್ಠ ಎರಡು ಅವಧಿಗೆ ಆಯ್ಕೆ ಮಾಡಲು ಅವಕಾಶ ನೀಡಿದೆ. ವಾರ್ಡ್ ಸಮಿತಿ ಕಾರ್ಯದರ್ಶಿ ಹುದ್ದೆಗೆ ಗರಿಷ್ಠ ವಯಸ್ಸು 50 ವರ್ಷ, ಎರಡು ಅವಧಿ ಸೀಮಿತಗೊಳಿಸಿದೆ. ಪಟ್ಟಣ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಹುದ್ದೆಗೆ ಗರಿಷ್ಠ ವಯಸ್ಸು 60 ವರ್ಷ ಮತ್ತು ಎರಡು ಅವಧಿ ಆಯ್ಕೆ ಮಾಡಿಕೊಳ್ಳಬಹುದು.
ಪ್ರದೇಶ ಸಮಿತಿ ಕಾರ್ಯದರ್ಶಿಗೆ ಗರಿಷ್ಠ ವಯಸ್ಸು 60 ವರ್ಷ, ಎರಡು ಅವಧಿ, ನಗರ ಸಮಿತಿ ಕಾರ್ಯದರ್ಶಿಗೆ ಗರಿಷ್ಠ ವಯಸ್ಸು 60 ವರ್ಷ, ಎರಡು ಅವಧಿಯಾಗಿದೆ. ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಸರಾಸರಿ 40 ಸಾವಿರ ಮತದಾರರನ್ನು ಒಳಗೊಂಡಂತೆ ಪ್ರದೇಶ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಇತರ ಮಹಾನಗರ ಪಾಲಿಕೆಗಳಲ್ಲಿ ಸರಾಸರಿ 30 ಸಾವಿರ ಮತದಾರರನ್ನು ಒಳಗೊಂಡ ಪ್ರದೇಶ ಸಮಿತಿಗಳನ್ನು ರಚಿಸಲಾಗುತ್ತದೆ. ಇದನ್ನೂ ಓದಿ: ಡಿಕೆಶಿ ನೋಡಿದ ತಕ್ಷಣ ಹೆಚ್‌ಡಿಕೆಗೆ ಹೊಟ್ಟೆ ತೊಳಸಿದಂತೆ ಆಗುತ್ತೆ: ಹೆಚ್.ಸಿ ಬಾಲಕೃಷ್ಣ
ನಗರ ಸಮಿತಿಗಳನ್ನೂ ಸರಾಸರಿ 40 ಸಾವಿರ ಮತದಾರರ ಆಧಾರದ ಮೇಲೆ ರೂಪಿಸುವ ಪ್ರಸ್ತಾವವಿದೆ. ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲೆಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ 77 ಜಿಲ್ಲಾ ಘಟಕಗಳನ್ನು 110ಕ್ಕೆ ಹೆಚ್ಚಿಸುವ ಪ್ರಸ್ತಾವ ಅಂಗೀಕರಿಸಲಾಗಿದೆ. ಜಿಲ್ಲಾ ಸಮಿತಿ ಕಾರ್ಯದರ್ಶಿಗಳ ಗರಿಷ್ಠ ವಯಸ್ಸನ್ನು 70 ವರ್ಷಕ್ಕೆ ನಿಗದಿಪಡಿಸಲಾಗಿದ್ದು, ಅವರಿಗೆ ಗರಿಷ್ಠ ಮೂರು ಅವಧಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಎದುರಾದ ಹಿನ್ನಡೆಯ ಬಳಿಕ ಡಿಎಂಕೆ ಸಂಘಟನಾ ಪುನರ್‌ವ್ಯವಸ್ಥೆಗೆ ಮುಂದಾಗಿದೆ. ಪಕ್ಷದ ಸಂಘಟನೆಯಲ್ಲಿ ಹೊಸ ಚೈತನ್ಯ ತುಂಬುವುದು ಹಾಗೂ ಯುವಜನರಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವುದು ಈ ಬದಲಾವಣೆಗಳ ಪ್ರಮುಖ ಉದ್ದೇಶವಾಗಿದೆ. ಇದನ್ನೂ ಓದಿ: ಜಾನ್ವಿಗೆ ಸಿಹಿ – ಕಹಿ; ಎಲ್ಲಾ ಫ್ಯಾನ್ ಪೇಜ್‌ಗಳಲ್ಲಿನ ಫೋಟೋ ತೆಗೆಸಲು ಕೋರ್ಟ್ ನಕಾರ

