– 552 ಪೇಜ್‌ಗಳಲ್ಲಿನ ಅಶ್ಲೀಲ ಫೋಟೋಗಳನ್ನ ತೆಗೆದುಹಾಕಲು ದೆಹಲಿ ಹೈಕೋರ್ಟ್ ಆದೇಶ
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ವೈಯಕ್ತಿಕ ಹಕ್ಕುಗಳು (Personality Rights) ಕುರಿತ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸುಮಾರು ಸಾವಿರಾರು ವೆಬ್ ಪೇಜ್‌ಗಳಲ್ಲಿರುವ ಅಶ್ಲೀಲ ಫೋಟೋ ಮತ್ತು ಪೋರ್ನೋಗ್ರಾಫಿಕ್ ವಿಷಯವನ್ನು ತೆಗೆದುಹಾಕುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದ್ರೆ, ಅವರ ಹೆಸರಿನಲ್ಲಿ ಅಥವಾ ಗುರುತಿನೊಂದಿಗೆ ಕಾರ್ಯನಿರ್ವಹಿಸುವ ಎಲ್ಲಾ ಫ್ಯಾನ್ ಪೇಜ್‌ಗಳು ಮತ್ತು URLಗಳನ್ನು ಸಮಗ್ರವಾಗಿ ತೆಗೆಸಲು ಕೋರ್ಟ್ ನಿರಾಕರಿಸಿದೆ.

6,884 URLಗಳ ವಿರುದ್ಧ ಅರ್ಜಿ
ಜಾನ್ವಿ ಕಪೂರ್ (Janhvi Kapoor) ಅವರ ವ್ಯಕ್ತಿತ್ವ ಹಕ್ಕುಗಳ ಪ್ರಕರಣದಲ್ಲಿ ಸುಮಾರು 6,884 URLಗಳು ಒಳಗೊಂಡಿದ್ದವು. ಈ ಎಲ್ಲಾ URLಗಳನ್ನ ತೆಗೆದುಹಾಕುವಂತೆ ನಟಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು, ಆನ್‌ಲೈನ್‌ನಲ್ಲಿ ಹಾಕಿರುವ ಎಲ್ಲಾ ವಿಷಯಗಳನ್ನ ಒಂದೇ ರೀತಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಎಲ್ಲಾ URL ಗಳಿಗೂ ಅನ್ವಯಿಸುವಂತೆ ಒಂದೇ ಬಾರಿಗೆ ಟೇಕ್‌ಡೌನ್ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಾಥಮಿಕ ಪರಿಶೀಲನೆಯ ವೇಳೆ 552 URLಗಳಲ್ಲಿ ಅತ್ಯಂತ ಅಶ್ಲೀಲ ಅಥವಾ ಪೋರ್ನೋಗ್ರಾಫಿಕ್ ಸ್ವರೂಪದ ವಿಷಯ ಕಂಡುಬಂದ ಹಿನ್ನೆಲೆಯಲ್ಲಿ, ಅವುಗಳನ್ನ ತೆಗೆದುಹಾಕುವಂತೆ ನ್ಯಾಯಾಲಯ ಆದೇಶಿಸಿದೆ.

ಫ್ಯಾನ್ ಪೇಜ್‌ಗಳ ಬಗ್ಗೆ ಕೋರ್ಟ್ ಹೇಳಿದ್ದೇನು?
ಸೆಲೆಬ್ರಿಟಿಯ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಫ್ಯಾನ್ ಪೇಜ್ ಕೂಡ ಕಾನೂನುಬಾಹಿರವಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಇಂತಹ ಫ್ಯಾನ್ ಪೇಜ್‌ಗಳಲ್ಲಿ ನಟಿಯ ಫೋಟೋಗಳು, ವೀಡಿಯೊಗಳು, ಸಿನಿಮಾಗಳಿಗೆ ಸಂಬಂಧಿಸಿದ ಮಾಹಿತಿ, ಅಭಿಮಾನಿಗಳ ಮೆಚ್ಚುಗೆ ಅಥವಾ ಟೀಕೆಗಳು ಇರಬಹುದು. ಕೇವಲ ಸೆಲೆಬ್ರಿಟಿಯ ಹೆಸರು ಅಥವಾ ಚಿತ್ರವನ್ನ ಬಳಸಲಾಗಿದೆ ಎಂಬ ಕಾರಣಕ್ಕೆ ಎಲ್ಲಾ ಫ್ಯಾನ್ ಕ್ಲಬ್‌ಗಳನ್ನ ಹೇಗೆ ಮುಚ್ಚಲು ಸಾಧ್ಯ? ಎಂದು ಕೋರ್ಟ್ ಪ್ರಶ್ನಿಸಿತು.
ಆದ್ರೆ ಯಾವುದೇ ಪೇಜ್‌ನಲ್ಲಿ ಅಶ್ಲೀಲ ವಿಷಯ ಪ್ರಕಟಿಸಿದರೆ ಅಥವಾ ಸೆಲೆಬ್ರಿಟಿಯ ಗುರುತನ್ನ ಬಳಸಿಕೊಂಡು ವಾಣಿಜ್ಯ ಲಾಭ ಗಳಿಸಲು ಪ್ರಯತ್ನಿಸಿದರೆ, ಅಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿತು.

