ಮೈಸೂರು: ಮಂತ್ರಿಗಳು ವರ್ಗಾವಣೆಯ ಕಮೀಷನ್ ಏಜೆಂಟ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಬಿಜೆಪಿ ನಾಯಕರ ಪ್ರವಾಸ ಆರಂಭವಾಗಿದ್ದು, ಮೈಸೂರು ಭಾಗದ ನೇತೃತ್ವ ವಹಿಸಿರುವ ಕೆ.ಎಸ್. ಈಶ್ವರಪ್ಪನವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ಪ್ರವಾಸಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ವರ್ಗಾವಣೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಿರಲಿಲ್ಲ. ಮಂತ್ರಿಗಳು ವರ್ಗಾವಣೆಯ ಕಮೀಷನ್ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ನಾನು ಈ ಮಾತನ್ನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ವರ್ಗಾವಣೆಯ ವಿಚಾರದಲ್ಲಿ ಸಿಎಂ ಕಣ್ಮುಚ್ಚಿ ಕುಳಿತು ಕೊಂಡಿರುವುದು ಒಳ್ಳೆಯದಲ್ಲ. ಎಲ್ಲಾ ಹಂತದ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯಲಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಯಾವ ಕ್ಷಣದಲ್ಲಿ ಈ ಸರ್ಕಾರ ಬೀಳುತ್ತೋ, ಯಾವ ಕ್ಷಣದಲ್ಲಿ ನಮ್ಮ ವರ್ಗಾವಣೆ ಆಗುತ್ತೋ ಎಂಬ ಆತಂಕದಲ್ಲಿದ್ದಾರೆ ಎಂದರು.
Advertisement
ಆಪರೇಷನ್ ಕಮಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾವಾಗಿ ನಾವು ಕಾಂಗ್ರೆಸ್ ಶಾಸಕರನ್ನು ಸರ್ಕಾರ ಬೀಳಿಸೋಣಾ ಬನ್ನಿ ಎಂದು ಕರೆಯುವುದಿಲ್ಲ. ಬಿಜೆಪಿ ಕರೆದ ಕೂಡಲೇ ನಮ್ಮ ಜೊತೆ ಬರುವಷ್ಟು ಕಾಂಗ್ರೆಸ್ ಶಾಸಕರು ದುರ್ಬಲರಾ ಎಂದು ಪ್ರಶ್ನಿಸಿದರು. ಅಲ್ಲದೇ ನೀವು ನಮ್ಮ ಒಬ್ಬ ಶಾಸರಕರನ್ನು ಮುಟ್ಟಿ ನೋಡೋಣಾ, ನಮ್ಮ ಶಾಸಕರುಗಳು ಸಿಂಹ ರೂಪದವರು ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ಬಗ್ಗೆ ಅವರ ಅಧ್ಯಕ್ಷರಿಗೆ ನಂಬಿಕೆ ಇಲ್ಲ. ಇಂತಹ ಸರ್ಕಾರ ಹೇಗೆ ಉಳಿಯುತ್ತೆ. ಕಾಂಗ್ರೆಸ್ ಶಾಸಕರು ಮಾರಾಟದ ವಸ್ತುಗಳಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಡಿಕೆಶಿ ಹೇಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ರಾಜ್ಯದ ಜೆಡಿಎಸ್ – ಕಾಂಗ್ರೆಸ್ ಶಾಸಕರು ದುರ್ಬಲರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews