ಮುಂಬೈ: ಎಟಿಎಂಗೆ ನುಗ್ಗಿ ಯಂತ್ರವನ್ನ ತೆರೆದು ಅಥವಾ ಒಡೆದು ಕಳ್ಳತನ ಮಾಡಿರೋ ಬಗ್ಗೆ ಈ ಹಿಂದೆ ಸುದ್ದಿಯಾಗಿದೆ. ಆದ್ರೆ ಖದೀಮರು ಎಟಿಎಂ ತೆರೆಯದೇ, ಯಂತ್ರವನ್ನ ಒಡೆಯದೇ ಬರೋಬ್ಬರಿ 20.8 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಫೆಬ್ರವರಿಯಲ್ಲಿ ಇಬ್ಬರು ಮುಸುಕುಧಾರಿಗಳು ಈ ಕೃತ್ಯವೆಸಗಿದ್ದಾರೆ. ಘಟನೆ ನಡೆದು ತಿಂಗಳುಗಳೇ ಕಳೆದಿದ್ದು ಕಳೆದ ಶುಕ್ರವಾರ ಈ ಬಗ್ಗೆ ಎಫ್‍ಐಆರ್ ದಾಖಲಾಗಿದೆ. ನಾಗಪಾದಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Advertisement
ಇಲ್ಲಿನ ಸಾಂಟಾಕ್ರೂಸ್ ನಿವಾಸಿಯಾದ 35 ವರ್ಷದ ನಿಖಿಲ್ ಸಾಹು ಎಂಬವರು ಎಲೆಕ್ಟ್ರಾನಿಕ್ ಪೇಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಮೇಲ್ವಿಚಾರಕರಾಗಿದ್ದು ಕಳೆದ ಶುಕ್ರವಾರ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಿಖಿಲ್ ಸಾಹು ಕೆಲಸ ಮಾಡುವ ಸಂಸ್ಥೆಯ ಮಾಲೀಕರು ಬ್ಯಾಂಕ್‍ಗಳಿಗೆ ಎಟಿಎಂಗಳನ್ನ ಒದಗಿಸ್ತಾರೆ ಹಾಗೂ ಎಟಿಎಂಗಳಿಗೆ ಹಣವನ್ನು ತುಂಬುವ ವ್ಯವಸ್ಥೆಯನ್ನೂ ಮಾಡ್ತಾರೆ.
Advertisement
ದೂರಿನಲ್ಲಿ ಏನಿದೆ?: ಫೆಬ್ರವರಿ 11ರಂದು ನಸುಕಿನ ಜಾವ ಸುಮಾರು 3.21 ರಿಂದ 4.31ರ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಂಬೈ ಸೆಂಟ್ರಲ್‍ನ ಮರಾಠಾ ಮಂದಿರದ ಬಳಿ ಇರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ನುಗ್ಗಿದ್ದಾರೆ. ಈ ಇಬ್ಬರು ಮಾಲ್‍ವೇರ್ ಬಳಸಿ ಲ್ಯಾಪ್‍ಟಾಪ್ ಮೂಲಕ ಸಿಸ್ಟಮ್ ಅಪ್ಲಿಕೇಷನನ್ನು ಎಟಿಎಂ ಡಿಸ್ಪೆನ್ಸರ್‍ಗೆ ಹಾಕಿ ಹ್ಯಾಕ್ ಮಾಡಿದ್ದಾರೆ. ನಂತರ 2 ಸಾವಿರ ರೂ. ಮುಖಬೆಲೆಯ 1,040 ನೋಟುಗಳನ್ನ(20.8 ಲಕ್ಷ ರೂ.) ವಿತ್‍ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
Advertisement
ಎಟಿಎಂ ತೆರೆಯದೆಯೇ ಹ್ಯಾಕ್ ಮಾಡುವ ಮೂಲಕ ಈ ಕಳ್ಳರು ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಕದ್ದಿದ್ದಾರೆ ಎಂದು ನಾಗಪಾದಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸಂಜಯ್ ಬಸ್ವತ್ ಹೇಳಿದ್ದಾರೆ.
Advertisement
ಕಂಪೆನಿಯ ಉಸ್ತುವಾರಿ ಘಟಕ ಎಟಿಎಂ ಸ್ಥಗಿತವಾಗಿದ್ದನ್ನು ಗಮನಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಎಟಿಎಂ ಉತ್ಪಾದಕ ಸಂಸ್ಥೆ ಹಾರ್ಡ್ ಡಿಸ್ಕ್ ಪರಿಶೀಲಿಸಿದ ನಂತರ ಈ ಎಟಿಎಂ ಹ್ಯಾಕ್ ಆಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಎಟಿಎಂ ಯಂತ್ರವನ್ನ ಈ ರೀತಿ ಹೈಟೆಕ್ ಆಗಿ ದೋಚಿರುವುದು ಮಹಾರಾಷ್ಟ್ರದಲ್ಲಿ ಇದೇ ಮೊದಲು ಹಾಗೂ ಭಾರತದಲ್ಲಿ ಎರಡನೆಯದು ಎಂದು ದೂರುದಾರ ಸಂಸ್ಥೆ ಹೇಳಿದೆ. ಕಳ್ಳತನ ಮಾಡಿರುವವರು ತಾಂತ್ರಿಕ ಜ್ಞಾನ ಹೊಂದಿದ್ದು, ಎಟಿಎಂ ಹೇಗೆ ಕೆಲಸ ಮಾಡುತ್ತದೆ ಎಂದು ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಎಟಿಎಂಗೆ ಹಣ ತುಂಬಲು ಕಾಂಟ್ರಾಕ್ಟ್ ನೀಡಲಾಗಿರೋ ಪ್ರಸ್ತುತ ಸಂಸ್ಥೆ ಹಾಗೂ ಈ ಹಿಂದೆ ಇದ್ದ ಸಂಸ್ಥೆ ಎರಡನ್ನೂ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಸಂಸ್ಥೆಯ ಹಾಲಿ ಹಾಗೂ ಮಾಜಿ ನೌಕರರ ಮಾಹಿತಿಯನ್ನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.