ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣುಸ್ಥಾವರಕ್ಕೆ(Kaiga Nuclear Plant) ಕೊಂಡೊಯ್ಯಲಾಗುತ್ತಿದ್ದ ಬೃಹತ್ ವಿಕಿರಣ ರಕ್ಷಾ ಕವಚ(Radiation Shield) ಹೊತ್ತ ವಾಹನವೊಂದು ಗುರಿ ತಲುಪಲು ಕೇವಲ ನಾಲ್ಕು ಕಿಲೋಮೀಟರ್ ಬಾಕಿ ಇರುವಾಗ ಪಲ್ಟಿಯಾದ ಘಟನೆ ಕಾರವಾರ(Karawara) ತಾಲೂಕಿನ ಹಟುಗಾ ಗ್ರಾಮದಲ್ಲಿ ನಡೆದಿದೆ.
ಫೆಬ್ರವರಿ 9 ರಂದು ಗುಜರಾತ್‌ನ ಸೂರತ್‌ನಿಂದ (Surat) ಕೈಗಾ ಅಣುಸ್ಥಾವರಕ್ಕೆ ಈ 140 ಟನ್ ತೂಕ ಹೊಂದಿದ್ದ ವಿಕಿರಣ ರಕ್ಷಾ ಕವಚವನ್ನು ಮಲ್ಟಿ ಎಕ್ಸಲ್ ವಾಹನದ ಮೂಲಕ ಸಾಗಿಸಲಾಗುತ್ತಿತ್ತು. ಹಗಲಿರುಳು ಪರಿಶ್ರಮ ಪಟ್ಟು ಸೂರತ್‌ನಿಂದ ಕಾರವಾರ ನಗರವನ್ನು ದಾಟಿದ್ದ ಈ ವಾಹನ, ಹಟುಗಾ ಗ್ರಾಮದ ಸಮೀಪದ ತಿರುವಿನಲ್ಲಿ ಸಂಚರಿಸುವಾಗ ಇದ್ದಕ್ಕಿದ್ದಂತೆ ಟಯರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ.
ಕೈಗಾ ಅಣುಸ್ಥಾವರದ 5 ಮತ್ತು 6ನೇ ಘಟಕದಲ್ಲಿ ವಿಕಿರಣ ರಕ್ಷಾ ಕವಚವಾಗಿ ಅಳವಡಿಸಲು ಇದನ್ನು ತರಲಾಗುತ್ತಿತ್ತು. ಈ ಯೋಜನೆಯ ಹೊಣೆಯನ್ನು L&T ಕಂಪನಿ ನಿರ್ವಹಿಸುತ್ತಿದ್ದು, ಸಾಗಾಟದ ಜವಾಬ್ದಾರಿಯನ್ನು ನೆಪ್ರೋಸ್ ಟ್ರಾನ್ಸ್‌ಪೋರ್ಟ್ ಕಂಪನಿ ಹೊತ್ತುಕೊಂಡಿತ್ತು.
ಬೃಹತ್ ಯಂತ್ರ ರಸ್ತೆಗೆ ಬಿದ್ದಿದ್ದರೂ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅಥವಾ ಯಾರಿಗೂ ಗಾಯಗಳಾಗಿಲ್ಲ. ವಾಹನ ಪಲ್ಟಿಯಾದ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ 140 ಟನ್ ತೂಕದ ಈ ಬೃಹತ್ ಯಂತ್ರ ಹಾಗೂ ವಾಹನವನ್ನು ಮೇಲೆತ್ತುವ ಕಾರ್ಯಾಚರಣೆ ಚುರುಕಿನಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗಾ-ಇಳಕಲ್ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

