ಮಂಗಳೂರು: ಕರಾವಳಿ ಭಾಗದ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದ್ದು ಮಂಗಳೂರನ್ನು (Mangaluru) ದಕ್ಷಿಣ ರೈಲ್ವೆಯ ಪಾಲಕ್ಕಾಡ್(Palakkad) ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗದ(Mysuru Division) ವ್ಯಾಪ್ತಿಗೆ ತರಲು ರೈಲ್ವೆ ಮಂಡಳಿ ನಿರ್ಧರಿಸಿದೆ.
ಮಂಗಳೂರು ರೈಲ್ವೆ ನೆಟ್‌ವರ್ಕ್ ದಕ್ಷಿಣ ರೈಲ್ವೆಯ (Southern Railway) ಪಾಲಕ್ಕಾಡ್ ವಿಭಾಗಕ್ಕೆ ಒಳಪಟ್ಟಿರುವುದರಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಹಳೆಯ ಮತ್ತು ಕಳಪೆ ಗುಣಮಟ್ಟದ ರೈಲು ಬೋಗಿಗಳನ್ನು ಮಂಗಳೂರು ಮಾರ್ಗಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದವು.
ಈಗ ರೈಲ್ವೆ ಮಂಡಳಿ ಈ ಬೇಡಿಕೆಗೆ ಸ್ಪಂದಿಸಿದ್ದು ಪ್ರಸ್ತುತ ದಕ್ಷಿಣ ರೈಲ್ವೆ (SR) ಮತ್ತು ನೈರುತ್ಯ ರೈಲ್ವೆ (SWR) ನಡುವೆ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಜಾಲವನ್ನು ಒಂದೇ ಆಡಳಿತದಡಿ ತರಲು ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ(Captain Brijesh Chowta) ಎಕ್ಸ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
2024ರ ಜೂನ್‌ನಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ಬೇಡಿಕೆಯನ್ನು ಆದ್ಯತೆಯಾಗಿ ಕೈಗೆತ್ತಿಕೊಂಡಿದ್ದಾಗಿ ತಿಳಿಸಿದ ಸಂಸದ ಚೌಟ, “ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಂಸತ್ತು ಸೇರಿದಂತೆ ಎಲ್ಲ ಸಾಂಸ್ಥಿಕ ವೇದಿಕೆಗಳ ಮೂಲಕ ಈ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು. ಸಚಿವರ ಸಕಾರಾತ್ಮಕ ಸ್ಪಂದನೆಯಿಂದಾಗಿ ಈ ಬಹುಕಾಲದ ಕನಸು ಇಂದು ನನಸಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.
Mangaluru’s railways are finally coming under one roof!
A long-pending demand is being fulfilled as the Mangaluru railway region, currently divided across Southern & South Western Railways, is being brought under South Western Railway’s Mysuru Division.
This gives me a great… pic.twitter.com/3tHQNxVKuP
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) August 21, 2026
ವಿಭಾಗೀಯ ಗಡಿಗಳ ತೊಡಕು ನಿವಾರಣೆಯಾಗಿ, ಆಡಳಿತಾತ್ಮಕ ಹೊಂದಾಣಿಕೆ ಮತ್ತು ಕಾರ್ಯಕ್ಷಮತೆ ಸುಧಾರಿಸಲಿದೆ. ರೈಲು ಪ್ರಯಾಣಿಕರ ಅಹವಾಲು ಮತ್ತು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದನೆ ದೊರೆಯಲಿದೆ. ಕರಾವಳಿ ಕರ್ನಾಟಕದ ರೈಲ್ವೆ ಮೂಲಸೌಕರ್ಯ, ಹಳಿ ಜೋಡಿ ಮಾರ್ಗ ಹಾಗೂ ಹೊಸ ರೈಲು ಸಂಪರ್ಕ ಯೋಜನೆಗಳಿಗೆ ಹೆಚ್ಚಿನ ಒತ್ತು ಸಿಗಲಿದೆ.
ಈ ಮಹತ್ವದ ಐತಿಹಾಸಿಕ ನಿರ್ಧಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬ್ರಿಜೇಶ್ ಚೌಟ ಧನ್ಯವಾದ ಸಲ್ಲಿಸಿದ್ದಾರೆ.
ಮಂಗಳೂರು ವಿಭಾಗ ಪ್ರತ್ಯೇಕಗೊಂಡರೆ ಪಾಲಕ್ಕಾಡು ವಿಭಾಗಕ್ಕೆ ದೊಡ್ಡ ಮಟ್ಟದ ಆದಾಯ ತರುತ್ತಿರುವ ಪಣಂಬೂರು ಬಂದರು ಕೈತಪ್ಪಿ ಹೋಗುತ್ತದೆ ಎಂದು ಕೇರಳ ಸರ್ಕಾರ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಸಕ್ಕರೆ ಬೆಲೆ ಏರಿಕೆಗೂ ಎಥೆನಾಲ್ ಬಳಕೆಗೂ ಸಂಬಂಧವಿಲ್ಲ: ಕೇಂದ್ರ ಸ್ಪಷ್ಟನೆ
ಈ ಹೊಸ ಆಡಳಿತಾತ್ಮಕ ಬದಲಾವಣೆಯು 2026ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಸೇರಿದಂತೆ ಉಳ್ಳಾಲ ರೈಲ್ವೇ ನಿಲ್ದಾಣದವರೆಗಿನ ಸಂಪೂರ್ಣ ಪ್ರದೇಶವು ಮೈಸೂರು ವಿಭಾಗಕ್ಕೆ ಹಸ್ತಾಂತರಗೊಳ್ಳಲಿದೆ. ಪ್ರಸ್ತುತ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳ ನಡುವೆ ‘ಪಡೀಲ್’ ರೈಲ್ವೇ ನಿಲ್ದಾಣವು ಗಡಿಯಾಗಿತ್ತು. ಇನ್ನು ಮುಂದೆ ‘ಉಳ್ಳಾಲ’ ರೈಲ್ವೆ ನಿಲ್ದಾಣವು ನೂತನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ನೂತನ ವ್ಯವಸ್ಥೆಯಡಿ ವಿಭಾಗೀಯ ಪ್ರಧಾನ ಕಚೇರಿ ಮೈಸೂರಿನಲ್ಲಿದ್ದರೆ, ವಲಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಇರಲಿದೆ. ತೊಕೂರು ರೈಲ್ವೆ ನಿಲ್ದಾಣವು ಪ್ರಸ್ತುತ ಇರುವಂತೆ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ಹಾಗೂ ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ಕರಾವಳಿಗರ ಬೇಡಿಕೆ ಏನಿತ್ತು?
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕೇರಳದ ರೈಲುಗಳಿಗೆ ನೀಡುವಷ್ಟೇ ಆದ್ಯತೆಯನ್ನು ಕರ್ನಾಟಕದ ರೈಲುಗಳಿಗೂ ನೀಡಬೇಕು. ಮಂಗಳೂರಿನಿಂದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಕೊರತೆಯಿದೆ. ಆದರೆ ಅಧಿಕಾರಿಗಳು ಇದ್ದ ಮಾರ್ಗಗಳನ್ನೂ ಕೇರಳದ ಕಡೆಗೆ ವಿಸ್ತರಿಸುತ್ತಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕೇರಳದ ಅಧಿಕಾರಿಗಳದ್ದೇ ಮೇಲುಗೈ ಇರುವುದರಿಂದ ಮಂಗಳೂರಿಗೆ ಬರುವ ಆದಾಯವನ್ನು ಕೇರಳದ ರೈಲ್ವೆ ಯೋಜನೆಗಳಿಗೆ ಬಳಸಲಾಗುತ್ತಿದೆ. ಆದರೆ ಮಂಗಳೂರಿಗೆ ಮೂಲಸೌಕರ್ಯ ನೀಡುತ್ತಿಲ್ಲ ಎಂಬ ಆಕ್ರೋಶವಿತ್ತು.
ಮಂಗಳೂರು ರೈಲ್ವೆಯನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ, ಕರ್ನಾಟಕದ ಪ್ರಧಾನ ಕಚೇರಿಯನ್ನು ಹೊಂದಿರುವ ನೈರುತ್ಯ ರೈಲ್ವೆಯ (South Western Railway) ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಬೇಕು ಅಥವಾ ಮಂಗಳೂರನ್ನೇ ಪ್ರತ್ಯೇಕ ರೈಲ್ವೆ ವಿಭಾಗವನ್ನಾಗಿ ಮಾಡಬೇಕು ಎಂದು ಮಂಗಳೂರಿನ ರೈಲು ಬಳಕೆದಾರರ ಸಂಘಟನೆಗಳು ಒತ್ತಾಯಿಸಿದ್ದವು.
ಮಂಗಳೂರಿನಿಂದ ಕೋಟ್ಯಂತರ ರೂಪಾಯಿ ಆದಾಯ ರೈಲ್ವೆ ಇಲಾಖೆಗೆ ಹೋಗುತ್ತಿದ್ದರೂ, ಕರಾವಳಿ ಭಾಗಕ್ಕೆ ಸಿಗಬೇಕಾದ ರೈಲು ಸೌಕರ್ಯಗಳು ಸಿಗುತ್ತಿಲ್ಲ. ಈ ಕಾರಣದಿಂದ ಪಾಲಕ್ಕಾಡ್ ವಿಭಾಗದಿಂದ ಮಂಗಳೂರನ್ನು ಮುಕ್ತಗೊಳಿಸಿ ಎಂದು ಮಂಗಳೂರಿಗರು ಬೇಡಿಕೆ ಇರಿಸಿದ್ದರು.

