– ಪ್ರೀತಿ, ಕೊಲೆ, ಶವ ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನ
– ಪೊಲೀಸರ ಭಯಕ್ಕೆ ತಾಯಿ-ಮಗ ಆತ್ಮಹತ್ಯೆ
ಮಂಡ್ಯ: ಸಂಪೂರ್ಣ ಸುಟ್ಟು ಕರಕಲಾಗಿದ್ದ ಮಹಿಳೆಯ ಶವ (Woman corpse) ಪತ್ತೆಯಾದ ಪ್ರಕರಣವನ್ನು ಮಂಡ್ಯ ಪೊಲೀಸರು (Mandya Murder) ಯಶಸ್ವಿಯಾಗಿ ಭೇದಿಸಿದ್ದಾರೆ. ಯಾವುದೇ ಗುರುತು ಸಿಗದ ಸ್ಥಿತಿಯಲ್ಲಿದ್ದ ಶವದ ಹಿಂದಿನ ಮರ್ಡರ್ ಮಿಸ್ಟರಿಯನ್ನು ಪೊಲೀಸರು ಚಾಣಾಕ್ಷ ತನಿಖೆಯ ಮೂಲಕ ಬಯಲಿಗೆಳೆದಿದ್ದಾರೆ.
ಜೂನ್ 24ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜವನಹಳ್ಳಿಗುಡ್ಡದ ಬಳಿ ಮಹಿಳೆಯೊಬ್ಬಳ ಸುಟ್ಟ ಶವ ಪತ್ತೆಯಾಗಿತ್ತು. ಮೃತದೇಹದ ಬಳಿ ಸಿಕ್ಕಿದ್ದ ಲೇಡೀಸ್ ವಾಚ್, ಉಂಗುರ, ಹೇರ್ ಕ್ಲಿಪ್ ಹಾಗೂ ಮನೆ ಕೀಯನ್ನೇ ಸುಳಿವಾಗಿ ಇಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದರೂ ಆರಂಭದಲ್ಲಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.
ಬಳಿಕ ಶವ ಸಿಕ್ಕಿದ್ದ ಸ್ಥಳದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಇಟಿಯೋಸ್ ಕಾರೊಂದು ಪೊಲೀಸರ ಗಮನ ಸೆಳೆಯಿತು. ಕಾರಿನ ಮಾಲೀಕ ತಮಿಳುನಾಡಿನ ಉಪ್ಪಾರಹಳ್ಳಿಯ ರಾಜಶೇಖರ್ ಎಂದು ಪತ್ತೆಯಾಯಿತು. ವಿಚಾರಣೆಗೆ ಕರೆದಾಗ ಕಾರನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಿದ್ದೇನೆ ಎಂದು ರಾಜಶೇಖರ್ ಸುಳ್ಳು ಹೇಳಿದ್ದಾನೆ.
ತನಿಖೆ ತೀವ್ರವಾಗುತ್ತಿದ್ದಂತೆ ಸಿಕ್ಕಿಬೀಳುವ ಭಯದಿಂದ ಜೂನ್ 28ರಂದು ರಾಜಶೇಖರ್ ತನ್ನ ತಾಯಿಯೊಂದಿಗೆ ಉಪ್ಪಾರಹಳ್ಳಿಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಪೊಲೀಸರು ತನಿಖೆ ಮುಂದುವರಿಸಿದಾಗ ಕೊಲೆಯಾದ ಮಹಿಳೆ ನಳಿನಿ ಎಂಬುದು ಬೆಳಕಿಗೆ ಬಂದಿದೆ.ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಯುವಕನಿಗೆ ಪೊಲೀಸ್ ಠಾಣೆ ಎದುರೇ ಚಾಕು ಇರಿದ ಯುವತಿ ಮಾವ
ಜೂನ್ 22ರಂದು ನಳಿನಿ, ತನ್ನ ಸ್ನೇಹಿತೆ ಶ್ರೇಯಾಗೆ ಕರೆ ಮಾಡಿ, ನಾನು ರಾಜಶೇಖರ್ ಜೊತೆ ಹೋಗುತ್ತಿದ್ದೇನೆ, ಬೆಕ್ಕಿಗೆ ಊಟ ಹಾಕು ಎಂದು ಹೇಳಿ ಮನೆ ಬಿಟ್ಟಿದ್ದರು. ನಂತರ ರಾಜಶೇಖರ್ ನಳಿನಿಯನ್ನು ಉಪ್ಪಾರಹಳ್ಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ, ಶವವನ್ನು ಮಂಡ್ಯದ ಜವನಹಳ್ಳಿಗುಡ್ಡಕ್ಕೆ ತಂದು ಸುಟ್ಟು ಹಾಕಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಳಿನಿ ಮದುವೆಗೆ ಒತ್ತಾಯ ಮಾಡುತ್ತಿದ್ದ ಕಾರಣ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆ ಮಾಡಿದ ಬಳಿಕ ರಾಜಶೇಖರ್ ತನ್ನ ಸ್ನೇಹಿತ ವೆಂಕಿಗೆ ನಳಿನಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ. ನಳಿನಿ ಸ್ನೇಹಿತೆ ಶ್ರೇಯಾ ಕೇಳಿದಾಗಲೂ ಅವಳು ನನ್ನ ಜೊತೆ ಬಂದೇ ಇಲ್ಲ ಎಂದು ಸುಳ್ಳು ಹೇಳಿದ್ದಾನೆ. ಜೂನ್ 24ರಂದು ಶವ ಸುಟ್ಟಿದ್ದ ಸ್ಥಳಕ್ಕೂ ಮತ್ತೊಮ್ಮೆ ಭೇಟಿ ನೀಡಿದ್ದಾನೆ.
ಸದ್ಯ ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆ ಪೂರ್ಣಗೊಳಿಸಿ ಮರ್ಡರ್ ಮಿಸ್ಟರಿಯನ್ನು ಭೇದಿಸಿದ್ದಾರೆ. ಪ್ರೀತಿ, ಮದುವೆಯ ಒತ್ತಾಯ, ಕೊಲೆ, ಬಳಿಕ ಸಾಕ್ಷ್ಯ ನಾಶ ಮಾಡಲು ಶವ ಸುಟ್ಟದ್ದು, ಕೊನೆಗೆ ಪೊಲೀಸರ ಭಯಕ್ಕೆ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡೀ ಪ್ರಕರಣಕ್ಕೆ ಸಿನಿಮೀಯ ತಿರುವು ನೀಡಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪತ್ನಿ, ನಾದಿನಿ ಕೊಲೆ ಪ್ರಕರಣ; ಎಸ್ಕೇಪ್ ಆಗಿದ್ದ ಆರೋಪಿ ಪತಿ ಪೊಲೀಸರಿಗೆ ಶರಣು
