– ಜೈಲು ಅಧೀಕ್ಷಕಿ ಶಾಂತಮ್ಮ ಸೇರಿ ಸಿಬ್ಬಂದಿ ವಿರುದ್ಧ ಡಿಜಿಪಿಗೆ ಖೈದಿಗಳ ದೂರು
ಮಂಡ್ಯ: ವಿಚಾರಣಾಧೀನ ಖೈದಿಗಳಿಗೆ ರಾಜಾತಿಥ್ಯ ಒದಗಿಸಿದ ಪ್ರಕರಣದ ಬೆನ್ನಲ್ಲೇ, ಮಂಡ್ಯ ಜಿಲ್ಲಾ ಕಾರಾಗೃಹದ (Mandya District Jail) ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಮತ್ತೊಂದು ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ಜೈಲಿನಲ್ಲಿ ವಿಶೇಷ ಸವಲತ್ತು ಕಲ್ಪಿಸಲು ಖೈದಿಗಳಿಂದ (Prisoners) ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದನ್ನೂ ಓದಿ: ದಯಾಮರಣ ಕೋರಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ

ಖೈದಿಗಳು ತಮ್ಮ 15 ಜನರ ವಿಚಾರಣಾಧೀನ ಖೈದಿ ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಮುದ್ರೆಯೊಂದಿಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರಿಗೆ ಪತ್ರ ಬರೆದು ರಕ್ಷಣೆ ಹಾಗೂ ತನಿಖೆಗೆ ಒತ್ತಾಯಿಸಿದ್ದಾರೆ. ಜೈಲು ಅಧೀಕ್ಷಕಿ ಶಾಂತಮ್ಮ, ಸಿಬ್ಬಂದಿಗಳಾದ ಅನಿಲ್, ಶಿವರಾಜ ಹಾಗೂ ರವಿ ವಿರುದ್ಧ ಖೈದಿಗಳಿಂದ ಸುಲಿಗೆ ಮಾಡುತ್ತಿರುವ ನೇರ ಆರೋಪ ಕೇಳಿಬಂದಿದೆ.
ಸೆಲ್‌ಗಳಿಗೆ ನಿಗದಿಯಾದ ತಿಂಗಳ ದರಪಟ್ಟಿ:
* ಸೆಲ್ – 1: ಪ್ರತಿ ತಿಂಗಳು 10,000 ರೂ.
* ಸೆಲ್ – 3: ಪ್ರತಿ ತಿಂಗಳು 15,000 ರೂ.
* ಸೆಲ್ – 4: ಪ್ರತಿ ತಿಂಗಳು 15,000 ರೂ.
* ಸೆಲ್ – 5: ಪ್ರತಿ ತಿಂಗಳು 5,000 ರೂ.
* ಸೆಲ್ – 6: ಪ್ರತಿ ತಿಂಗಳು 8,000 ರೂ.
* ರೂಮ್ ಬದಲಾವಣೆಗೆ: 2,000 ರೂ.
* ಪನಿಷ್ಮೆಂಟ್ ಸೆಲ್‌ನಿಂದ ಹೊರಬರಲು: 10,000 ರೂ.

ಜೈಲಲ್ಲೇ ಸಿಗುತ್ತೆ ಕ್ಯಾಟರಿಂಗ್ ಸೇವೆ:
ಖೈದಿಗಳ ಬೇಡಿಕೆಗೆ ತಕ್ಕಂತೆ ಹಣ ಪಡೆದು ವಿಶೇಷ ಅಡುಗೆ ಮಾಡಿಸಿಕೊಡುವ ಕ್ಯಾಟರಿಂಗ್ ದಂಧೆಯೂ ಇಲ್ಲಿ ನಡೆಯುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಟನ್ ಬೇಕಾದರೆ ಪ್ರತಿ ಕೆಜಿಗೆ 1,250 ರೂ. ಹಾಗೂ ಚಿಕನ್‌ಗೆ ಪ್ರತಿ ಕೆಜಿಗೆ 700 ರೂ. ನಿಗದಿಪಡಿಸಲಾಗಿದೆ. ಹಣ ನೀಡದ ಖೈದಿಗಳಿಗೆ ಕಮಾನು ಹತ್ತಿಸುವುದಾಗಿ (ದೈಹಿಕ ಶಿಕ್ಷೆ) ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ 189 ಖಾಲಿ ನಿವೇಶನಗಳಿಗೆ ನೋಟಿಸ್ – ನಿವೇಶನ ಸ್ವಚ್ಛಗೊಳಿಸುವಂತೆ ಕೃಷ್ಣ ಬೈರೇಗೌಡ ಮನವಿ
ಇತ್ತೀಚೆಗಷ್ಟೇ ಡಿಜಿಪಿ ಅಲೋಕ್ ಕುಮಾರ್ ಹಾಗೂ ಕಾರಾಗೃಹ ಡಿಐಜಿ ದಿವ್ಯಶ್ರೀ ಮಂಡ್ಯ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಭೇಟಿ ವೇಳೆ ಇಂತಹ ಯಾವುದೇ ಲಿಖಿತ ಪತ್ರ ತಮಗೆ ಸಿಕ್ಕಿಲ್ಲ ಎಂದು ಡಿಐಜಿ ದಿವ್ಯಶ್ರೀ ಸ್ಪಷ್ಟಪಡಿಸಿದ್ದಾರೆ. ವೈರಲ್ ಪತ್ರದ ಆಧಾರದ ಮೇಲೆ ಇಲಾಖಾ ತನಿಖೆ ಮುಂದುವರಿದಿದೆ.
