ಚೈನೀಸ್ ಆಹಾರ ಪ್ರಿಯರಿಗೆ ‘ವೆಜ್ ಹಕ್ಕಾ ನೂಡಲ್ಸ್’ ಎಂದರೆ ಎಲ್ಲಿಲ್ಲದ ಇಷ್ಟ. ಹೊರಗಡೆ ಸಿಗುವಂತಹ ರುಚಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ತರಕಾರಿಗಳ ಪೌಷ್ಟಿಕಾಂಶ ಮತ್ತು ವಿಶೇಷ ಸಾಸ್‌ಗಳ ಸುವಾಸನೆಯಿಂದ ಈ ರೆಸಿಪಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಮಧ್ಯಾಹ್ನದ ಊಟ, ರಾತ್ರಿ ಡಿನ್ನರ್ ಅಥವಾ ಸಂಜೆ ಸ್ನ್ಯಾಕ್ ಆಗಿಯೂ ಇದನ್ನು ಸವಿಯಬಹುದು.

ಬೇಕಾಗುವ ಪದಾರ್ಥಗಳು
* ಹಕ್ಕಾ ನೂಡಲ್ಸ್ – 200 ಗ್ರಾಂ
* ಕ್ಯಾರೆಟ್ – 1 (ಉದ್ದವಾಗಿ ಹೆಚ್ಚಿದ್ದು)
* ಕ್ಯಾಪ್ಸಿಕಂ – 1 (ಉದ್ದವಾಗಿ ಹೆಚ್ಚಿದ್ದು)
* ಎಲೆಕೋಸು – 1 ಕಪ್ (ಸಣ್ಣದಾಗಿ ಹೆಚ್ಚಿದ್ದು)
* ಸ್ಪ್ರಿಂಗ್ ಆನಿಯನ್ – ¼ ಕಪ್
* ಈರುಳ್ಳಿ – 1 (ಉದ್ದವಾಗಿ ಹೆಚ್ಚಿದ್ದು)
* ಬೆಳ್ಳುಳ್ಳಿ – 5-6 ಎಸಳು (ನುಣ್ಣಗೆ ಹೆಚ್ಚಿದ್ದು)
* ಹಸಿ ಮೆಣಸಿನಕಾಯಿ – 2 (ಉದ್ದವಾಗಿ ಸೀಳಿದ್ದು)
* ಸೋಯಾ ಸಾಸ್ – 1 ಟೇಬಲ್ ಸ್ಪೂನ್
* ಗ್ರೀನ್ ಚಿಲ್ಲಿ ಸಾಸ್ – 1 ಟೀ ಸ್ಪೂನ್
* ಟೊಮೆಟೊ ಕೆಚಪ್ – 1 ಟೇಬಲ್ ಸ್ಪೂನ್
* ವಿನೆಗರ್ – 1 ಟೀ ಸ್ಪೂನ್
* ಕರಿಮೆಣಸು ಪುಡಿ – ½ ಟೀ ಸ್ಪೂನ್
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – 2 ಟೇಬಲ್ ಸ್ಪೂನ್

ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕೆಲವು ಹನಿ ಎಣ್ಣೆ ಸೇರಿಸಿ. ನಂತರ ನೂಡಲ್ಸ್ ಹಾಕಿ 4 ರಿಂದ 5 ನಿಮಿಷ ಬೇಯಿಸಿ. ಬೇಯಿಸಿದ ನೂಡಲ್ಸ್ ಅನ್ನು ತಣ್ಣೀರಿನಲ್ಲಿ ತೊಳೆದು ನೀರು ಸಂಪೂರ್ಣ ಬಸಿದುಕೊಳ್ಳಿ.
ಈಗ ಒಂದು ದೊಡ್ಡ ಪ್ಯಾನ್ ಅಥವಾ ವಾಕ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಬಳಿಕ ಈರುಳ್ಳಿ ಸೇರಿಸಿ ಒಂದು ನಿಮಿಷ ಹುರಿದ ನಂತರ ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಎಲೆಕೋಸು ಸೇರಿಸಿ ಹೆಚ್ಚಿನ ಉರಿಯಲ್ಲಿ 2 ರಿಂದ 3 ನಿಮಿಷ ಕಲಸಿ. ತರಕಾರಿಗಳು ಸ್ವಲ್ಪ ಕ್ರಂಚಿಯಾಗಿರುವಂತೆ ನೋಡಿಕೊಳ್ಳಿ.
ನಂತರ ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ವಿನೆಗರ್, ಕರಿಮೆಣಸು ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಬೇಯಿಸಿದ ನೂಡಲ್ಸ್ ಸೇರಿಸಿ ಸಾಸ್‌ಗಳು ಎಲ್ಲಾ ನೂಡಲ್ಸ್‌ಗೆ ಸಮವಾಗಿ ತಗುಲುವಂತೆ ಹೆಚ್ಚಿನ ಉರಿಯಲ್ಲಿ 2 ನಿಮಿಷ ಟಾಸ್ ಮಾಡಿ.
ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಸೊಪ್ಪು ಸಿಂಪಡಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

