ಸಿದ್ದರಾಮಯ್ಯನವರು ಜಮೀರ್ ಕಾಲಿಗೆ ಹೋಗಿ ಬೀಳ್ತಾರೆ: ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ಅವರು ಅತೀ ಹೆಚ್ಚು ಮುಸಲ್ಮಾನರು ಇರುವಂತಹ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಹಾಗಾಗಿ ಜಮೀರ್ ಅಹ್ಮದ್ ಖಾನ್ ಕಾಲಿಗೆ ಹೋಗಿ ಬೀಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂಗಳಿರುವ ಕ್ಷೇತ್ರದಿಂದ ಸ್ಪರ್ಧಿಸಿದರೆ ಖಂಡಿತವಾಗಿಯೂ ಸೋಲುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಹಾಗಾಗಿ ರಾಹುಲ್ ಗಾಂಧಿ ಅವರು ಕೇರಳದ ವಾಯನಾಡಿನಲ್ಲಿ ಹೇಗೆ ಬಂದು ಚುನಾವಣೆಗೆ ಸ್ಪರ್ಧಿಸಿದರೋ, ಹಾಗೆಯೇ ಸಿದ್ದರಾಮಯ್ಯ ಅವರು ಅತೀ ಹೆಚ್ಚು ಮುಸಲ್ಮಾನರು ಇರುವಂತಹ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಆದ್ದರಿಂದ ಜಮೀರ್ ಅಹ್ಮದ್ ಖಾನ್ ಕಾಲಿಗೆ ಹೋಗಿ ಬೀಳುತ್ತಾರೆ. ಹಿಂದೂಗಳಿಗೆ ಕಾಂಗ್ರೆಸ್‍ನವರು ಮಾಡಿರುವಷ್ಟು ದ್ರೋಹ ಬೇರೆ ಯಾರು ಮಾಡಿಲ್ಲ. ಸಿದ್ದರಾಮೋತ್ಸವ ಬಳಿಕ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಿ. ಸಿದ್ದರಾಮಯ್ಯನವರದ್ದು ಇದು ಕೊನೆಯ ನಾಟಕ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಮಾಜವಾದಿ ಸಿದ್ಧಾಂತ, ಕುವೆಂಪು ಆದರ್ಶದ ಬಗ್ಗೆ ಮಾತನಾಡುತ್ತಾರೆ. 75 ಕೋಟಿ ವೆಚ್ಚದಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇಷ್ಟು ವೆಚ್ಚದ ಬದಲಿಗೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡಬಹುದು. ಇಷ್ಟೊಂದು ಆಡಂಬರ ಸಿದ್ದರಾಮಯ್ಯನವರಿಗೆ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗ ವ್ಯಕ್ತಿ ಪೂಜೆ ನಡೆಯುತ್ತಿದೆ. ಬಿಜೆಪಿ ಟೀಕಿಸುವ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.