– ಬೆಂಗಳೂರಿಗೆ ಕಾಡಲಿದೆಯಾ ಕುಡಿಯುವ ನೀರಿನ ಅಭಾವ?
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಇಷ್ಟೊತ್ತಿಗಾಗಲೇ ಚುರುಕುಗೊಳ್ಳದ ಹಿನ್ನೆಲೆ, ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯದ (KRS Dam) ನೀರಿನ ಮಟ್ಟ 81 ಅಡಿಗೆ ಕುಸಿದಿದೆ.
ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ ನೀರಿನ (KRS Dam water) ಮಟ್ಟ 81 ಅಡಿಗೆ ಕುಸಿದಿದ್ದು, ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸ್ವಯಂ ಉದ್ಯೋಗದ ಹೆಸರಲ್ಲಿ ಪಂಗನಾಮ – 10 ಕೋಟಿ ವಂಚಿಸಿ ಜೋಡಿ ಪರಾರಿ

ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 108 ಅಡಿ. ಆದರೆ ಈ ಬಾರಿ ಮಳೆಯ ಅಭಾವದಿಂದಾಗಿ ಡ್ಯಾಂ ಸಂಪೂರ್ಣ ಖಾಲಿಯಾಗುವ ಹಂತಕ್ಕೆ ತಲುಪಿದೆ. ಈ ಹಿಂದೆ 2019 ರಲ್ಲಿ ಜಲಾಶಯದ ಮಟ್ಟ 80 ಅಡಿಗೆ ಕುಸಿದಿತ್ತು. ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ 11.399 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಆದರೆ ಇದರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಇರುವುದರಿಂದ, ಸದ್ಯ ಬಳಕೆಗೆ ಲಭ್ಯವಿರುವುದು ಮಾತ್ರ 6 ಟಿಎಂಸಿ ನೀರು ಅಷ್ಟೇ.
ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತಳ ಸೇರುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಪ್ರಮುಖ ನಗರಗಳಿಗೆ ಭಾರೀ ಸಂಕಷ್ಟ ಎದುರಾಗುವ ಮುನ್ಸೂಚನೆ ಇದೆ. ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವೇ ಕೆಆರ್‌ಎಸ್ ಆಗಿರುವುದರಿಂದ, ಹೀಗೆಯೇ ಮುಂದುವರಿದರೆ ಬೆಂಗಳೂರಿಗರಿಗೆ ಕುಡಿಯುವ ನೀರಿನ ಅಭಾವ ಎದುರಾಗುವುದು ಖಚಿತ ಎನ್ನಲಾಗಿದೆ. ಇದನ್ನೂ ಓದಿ: ಕಸಮುಕ್ತ ನಗರಕ್ಕೆ ಹೊಸ ಪ್ಲ್ಯಾನ್ – ಜಿಬಿಎಯಿಂದ ಇದೀಗ ಪರದೆ ಅಸ್ತ್ರ

ನಿಯಮಾವಳಿಗಳ ಪ್ರಕಾರ, ಜೂನ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ತಮಿಳುನಾಡಿಗೆ 9.19 ಟಿಎಂಸಿ ಕೋಟಾದ ನೀರನ್ನು ಹರಿಸಬೇಕಾಗಿದೆ. ಆದರೆ ಕೆಆರ್‌ಎಸ್ ಜಲಾಶಯದಲ್ಲೇ ಸದ್ಯ ಬಳಕೆಗೆ ಇರುವುದು ಕೇವಲ 6 ಟಿಎಂಸಿ ನೀರು. ಇದರಿಂದಾಗಿ ತಮಿಳುನಾಡಿನ ಜಲ ಸಮಸ್ಯೆ ತಲೆದೂರುವ ಆತಂಕ ಎದುರಾಗಿದ್ದು, ಉಭಯ ರಾಜ್ಯಗಳ ನಡುವೆ ಮತ್ತೆ ಕಾವೇರಿ ವಿವಾದದ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮುಂಬರುವ ದಿನಗಳಲ್ಲಿ ಮುಂಗಾರು ಮಳೆ ಚುರುಕಾಗಿ, ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರದಿದ್ದರೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಜಲ ಸಂಕಷ್ಟ ಫಿಕ್ಸ್ ಆದಂತೆ ಕಾಣುತ್ತಿದೆ. ಇದನ್ನೂ ಓದಿ: ಸ್ವಯಂ ಉದ್ಯೋಗದ ಹೆಸರಲ್ಲಿ ಪಂಗನಾಮ – 10 ಕೋಟಿ ವಂಚಿಸಿ ಜೋಡಿ ಪರಾರಿ
