– ಆಗಸ್ಟ್ ತಿಂಗಳೊಳಗಾಗಿ ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಸೂಚನೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಈವರೆಗೆ 964 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದ್ದು, ಬಾಕಿ ಇರುವ ಒತ್ತುವರಿಯನ್ನ ಆಗಸ್ಟ್ ತಿಂಗಳೊಳಗಾಗಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ‘ಪಾದಚಾರಿ ಮಾರ್ಗಗಳ ಒತ್ತುವರಿ ತೆರವು’, ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಹಾಗೂ ‘ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ’ ಕುರಿತು ನಡೆದ ವರ್ಚುವಲ್ ಸಭೆಯನ್ನ ಉದ್ದೇಶಿಸಿ ಇಂದು ಅವರು ಮಾತನಾಡಿದರು.
ನಗರದಲ್ಲಿ ಸುಮಾರು 1,500 ಕಿ.ಮೀ. ಉದ್ದದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ (Encroachment) ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪೈಕಿ ಈವರೆಗೆ 964 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಗಳನ್ನ ತೆರವುಗೊಳಿಸಲಾಗಿದೆ. ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿಯನ್ನ ಇದೇ ತಿಂಗಳೊಳಗಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನ ರೂಪಿಸಿರುವ ಯೋಜನೆಯಂತೆ ಸಮರ್ಪಕವಾಗಿ ಕೈಗೊಳ್ಳಬೇಕು. ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ದುರಸ್ತಿ ಕಾರ್ಯವನ್ನೂ ಸಮಾನಾಂತರವಾಗಿ ಕೈಗೊಳ್ಳುವಂತೆ ಸೂಚಿಸಿದರು.
ಪುನಃ ಒತ್ತುವರಿ ಮಾಡುವವರ ವಿರುದ್ಧ ದುಪ್ಪಟ್ಟು ದಂಡ:
ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿಯೇ ಬೀದಿ ಬದಿ ವ್ಯಾಪಾರಿಗಳು ಪುನಃ ಬಂದು ವ್ಯಾಪಾರ ಮುಂದುವರಿಸುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಪುನಃ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವವರ ಸಾಮಗ್ರಿಗಳನ್ನ ಜಪ್ತಿ ಮಾಡಿ, ಅವರಿಗೆ ದುಪ್ಪಟ್ಟು ದಂಡ ವಿಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಾದಚಾರಿ ಮಾರ್ಗಗಳ ತೆರವು ಕುರಿತು ಜಂಟಿ ಸಭೆ:
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯಬೇಕು. ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

