ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಹಗರಣದ ಬೆನ್ನಲ್ಲೇ, ಇದೀಗ ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲೂ ಬೃಹತ್ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ED), ಹಲವು ಸ್ಫೋಟಕ ಮಾಹಿತಿಗಳನ್ನು ಹೊರಗೆಡಹಿದೆ.
ಪರೀಕ್ಷೆ ಆರಂಭವಾಗುವ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಗಂಭೀರ ಅನುಮಾನ ವ್ಯಕ್ತವಾಗಿದ್ದು, ಆಯ್ದ ಅಭ್ಯರ್ಥಿಗಳನ್ನು ರಹಸ್ಯವಾಗಿ ಖಾಸಗಿ ರೆಸಾರ್ಟ್‌ಗೆ ಕರೆದೊಯ್ದು ತರಬೇತಿ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಸುಳಿವಿನ ಮೇರೆಗೆ ಇಡಿ ಅಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ನಡೆಸಿ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ವಿಚಾರಣೆಗೊಳಗಾದ ಕೆಲ ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವುದನ್ನು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೆಲ ಅಭ್ಯರ್ಥಿಗಳ ಮೇಲೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಇಡಿ ಅಧಿಕಾರಿಗಳು ಅವರಿಗೆ ಸ್ಥಳದಲ್ಲೇ 20 ಅಂಕಗಳ ಹೊಸ ಪ್ರಶ್ನೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ದಿಢೀರ್ ಪರೀಕ್ಷೆಯಿಂದ ಹಲವು ಅಭ್ಯರ್ಥಿಗಳು ತಬ್ಬಿಬ್ಬಾಗಿದ್ದು, ಒಎಂಆರ್ (OMR) ಶೀಟ್‌ಗಳ ದುರ್ಬಳಕೆಯೂ ನಡೆದಿರುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ಇಡಿಗೆ ಶಾಕ್; ಸಂಪರ್ಕಕ್ಕೆ ಸಿಗ್ತಿಲ್ಲ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ
ಇಡಿ ನಡೆಸುತ್ತಿರುವ ಈ ತನಿಖಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ಮೂಲದ ಲೋಕೇಶ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ್ದು, ಇ.ಡಿ ತನಿಖಾ ವಿಧಾನದ ಕುರಿತು ಪ್ರತ್ಯೇಕವಾಗಿ ಪ್ರಶ್ನಿಸಲು ಸೂಚನೆ ನೀಡಿದೆ.
ಶಾಂತ ಹೊಸಮನಿ ನಾಪತ್ತೆ
ಪ್ರಕರಣದ ತನಿಖೆಯ ಭಾಗವಾಗಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಇಡಿ ಅಧಿಕಾರಿಗಳು ತಡರಾತ್ರಿಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು, ಅವರ ಬಳಿಯಿದ್ದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ, ಸರ್ಚ್ ವಾರಂಟ್ ಸಮೇತ ಶೋಧಕ್ಕೆ ತೆರಳಿದ ಅಧಿಕಾರಿಗಳಿಗೆ ಶಾಂತ ಹೊಸಮನಿ ಎಂಬುವವರು ಪತ್ತೆಯಾಗಿಲ್ಲ. ಸದ್ಯ ಅವರು ಗೋವಾ ಅಥವಾ ಮೈಸೂರಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.

