ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್(Gyanendra Kumar) ಇಂದು ಸಿಐಡಿ (CID) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಗ್ಯಾನೇಂದ್ರ ಅವರು ನಿನ್ನೆಯೇ (ಆ.27) ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನಿನ್ನೆ ವಿಚಾರಣೆಗೆ ಗೈರಾಗಿದ್ದರು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಸಿಐಡಿ ಕಚೇರಿಗೆ ಆಗಮಿಸಿದ್ದಾರೆ.
ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಅವರ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ನಡೆದಿತ್ತು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪವಿದ್ದು, ಈ ಸಂಬಂಧ ಸಿಐಡಿ ತನಿಖಾ ತಂಡವು ಗ್ಯಾನೇಂದ್ರ ಕುಮಾರ್ ಅವರನ್ನು ವಿಚಾರಣೆ ನಡೆಸಲಿದೆ.
ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಳೆದ ವಾರ ಬೆಂಗಳೂರಿನಲ್ಲಿರುವ ಗ್ಯಾನೇಂದ್ರ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಗ್ಯಾನೇಂದ್ರ ಕುಮಾರ್ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಲಕ್ನೋದಲ್ಲಿರುವ ನಿವಾಸದ ಮೇಲೂ ದಿಢೀರ್ ದಾಳಿಯಾಗಿತ್ತು. ಈ ಸಂದರ್ಭದಲ್ಲೂ ಗ್ಯಾನೇಂದ್ರ ನಿವಾಸದಲ್ಲಿ ಇರಲಿಲ್ಲ.
