ಬೆಂಗಳೂರು: ಕೆಪಿಎಸ್‌ಸಿ ಹಗರಣ (KPSC Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ಗೆ (Gyanendra Kumar) ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪಶುವೈದ್ಯಕೀಯ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಕೆಪಿಎಸ್ಸಿಯಲ್ಲಿ ಎಕ್ಸಾಂ ಕಂಟ್ರೋಲರ್ ಆಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಸಿಐಡಿ ಪೊಲೀಸರು ನಿನ್ನೆ ಬಂಧನ ಮಾಡಿದ್ದರು. ಇಂದು ನಾಲ್ಕು ಗಂಟೆಗೆ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ಮನೆಗೆ ಆರೋಪಿಯನ್ನು ಸಿಐಡಿ ಪೊಲೀಸರು ಹಾಜರುಪಡಿಸಿದರು. ಇದನ್ನೂ ಓದಿ: Public TV Exclusive | ಕೆಪಿಎಸ್‌ಸಿ ನೇಮಕಾತಿ ಹಗರಣ – IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್
ನ್ಯಾಯಾಧೀಶರು ಅರೆಸ್ಟ್ ಬಗ್ಗೆ ಆರೋಪಿ ಗ್ಯಾನೇಂದ್ರರನ್ನ ಕೇಳಿದಾಗ, ಪ್ರಕರಣ ಸಂಬಂಧ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ಕೊಟ್ಟಿತ್ತು. ಎರಡು ದಿನ ವಿಚಾರಣೆ ಮಾಡಿ ಕಳಿಸಿ ನಂತರ ಕರೆದು ಅರೆಸ್ಟ್ ಮಾಡಿದ್ದಾರೆಂದು ಹೇಳಿದರು.
ಆರೋಪಿ ಬಂಧನದ ಮಾಹಿತಿ ಪಡೆದು 1ನೇ ಎಸಿಜೆಎಂ ನ್ಯಾಯಾಧೀಶ ಮಂಜುನಾಥ್ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಮಾಡಿದರು. ಸಿಐಡಿ ಪೊಲೀಸರು ಕೋರ್ಟ್ ಆದೇಶದಂತೆ ಆರೋಪಿ ಗ್ಯಾನೇಂದ್ರರನ್ನ ಪರಪ್ಪನ ಅಗ್ರಹಾರಕ್ಕೆ ಬಿಟ್ಟಿದ್ದು, ಮತ್ತೆ ನಾಳೆ ಓಪನ್ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಕಸ್ಟಡಿಗೆ ಪಡೆಯಲು ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: KPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆ
ಆರೋಪಿ ಗ್ಯಾನೇಂದ್ರರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಿದ್ದಂತೆ, ಆರೋಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
