ಕಾರವಾರ: ಕಸ್ತೂರಿ ರಂಗನ್ ವರದಿ (Kasturirangan Committee Report) ಜಾರಿಗೆ ವಿರೋಧಿಸಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಕಸ್ತೂರಿ ರಂಗನ್ ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಹೊನ್ನಾವರದ ಶರಾವತಿ ಸರ್ಕಲ್‌ನಿಂದ ಪ್ರತಿಭಟನಾ ರ‍್ಯಾಲಿ ಆರಂಭಗೊಂಡು ಮೂಡಗಣಪತಿ ದೇವಸ್ಥಾನದ ಸಮಾವೇಶ ಮೈದಾನದವರೆಗೆ ಸಾಗಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಪ್ರತಿಭಟನಾಕಾರರು ರ‍್ಯಾಲಿಯಲ್ಲಿ ಭಾಗವಹಿಸಿದರು. ಅರಣ್ಯ ಹಕ್ಕು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರವೀಂದ್ರನಾಥ ನಾಯ್ಕ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಿತು. ಕಸ್ತೂರಿ ರಂಗನ್ ವರದಿಯು ಉತ್ತರ ಕನ್ನಡ ಜಿಲ್ಲೆಯ ಜನರ ಬದುಕು ಮತ್ತು ಅಭಿವೃದ್ಧಿಗೆ ತೊಂದರೆ ಉಂಟುಮಾಡಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರವಾಹದಲ್ಲಿ ಮೃತಪಟ್ಟವರ ಸ್ಮರಣಾರ್ಥ ನೇಪಾಳದಲ್ಲಿ ರಾಷ್ಟ್ರೀಯ ಶೋಕಾಚರಣೆ
567 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಆರೋಪ
ಪ್ರತಿಭಟನಾಕಾರರ ಪ್ರಕಾರ, ಕಸ್ತೂರಿ ರಂಗನ್ ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 567 ಗ್ರಾಮಗಳನ್ನು ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಜುಲೈ 26ರಂದು ಏಳನೇ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ ಎಂದು ತಿಳಿಸಿದರು. ಒಂದೊಮ್ಮೆ ಈ ವರದಿ ಜಾರಿಯಾದರೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ತಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ಮನೆಗಳ ನವೀಕರಣ, ಮೊಬೈಲ್ ಟವರ್ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುವ ಆತಂಕವಿದೆ ಎಂದು ಹೇಳಿದರು.
ವರದಿ ಅವೈಜ್ಞಾನಿಕ ಎಂದು ಆರೋಪ
ಕಸ್ತೂರಿ ರಂಗನ್ ವರದಿಯನ್ನು ಪ್ರತಿಭಟನಾಕಾರರು ಅವೈಜ್ಞಾನಿಕ ಎಂದು ಟೀಕಿಸಿದರು. ಸ್ಥಳೀಯ ಪರಿಸ್ಥಿತಿಯನ್ನು ಸಮರ್ಪಕವಾಗಿ ಅಧ್ಯಯನ ಮಾಡದೆ ವೈಮಾನಿಕ ಸಮೀಕ್ಷೆಯ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದರು. ತೆಂಗಿನ ಮರಗಳು ಹಾಗೂ ಅಡಿಕೆ ತೋಟಗಳಿರುವ ಪ್ರದೇಶಗಳನ್ನೂ ಅರಣ್ಯ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರ ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ವರದಿಯನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಮನವಿ ನೀಡುವ ಮೂಲಕ ಒತ್ತಾಯಿಸಿದರು. ಇದನ್ನೂ ಓದಿ: ಪಕ್ಷದ ಹಿರಿಯರಿಗೆ ಹೀಗಾ ಅವಮಾನ ಮಾಡೋದು? – ಮಹದೇವಪ್ಪ ಪರ ಬ್ಯಾಟ್ ಬೀಸಿ ಬೈರತಿ ವಿರುದ್ಧ ಪ್ರತಾಪ್ ಕಿಡಿ
ಒಂದು ಲಕ್ಷ ಆಕ್ಷೇಪ ಪತ್ರ ಸಲ್ಲಿಕೆಗೆ ಸಿದ್ಧತೆ
ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧವಾಗಿ ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು ಒಂದು ಲಕ್ಷ ಆಕ್ಷೇಪ ಪತ್ರಗಳನ್ನು ಸಲ್ಲಿಸಲು ಹೋರಾಟಗಾರರು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯ ಸುಮಾರು ಒಂದು ಲಕ್ಷ ಕುಟುಂಬಗಳ ಪರವಾಗಿ ವರದಿಗೆ ಆಕ್ಷೇಪ ಅರ್ಜಿಗಳನ್ನು ಸಲ್ಲಿಸಲಾಗುವುದು ಎಂದು ಪ್ರತಿಭಟನೆ ಮುಂದಾಳತ್ವ ವಹಿಸಿದ ರವೀಂದ್ರನಾಯ್ಕ ತಿಳಿಸಿದ್ದಾರೆ.
ಸ್ಥಳೀಯ ಜನರ ಬದುಕು, ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
