ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಚಿವ ಬಿ. ನಾಗೇಂದ್ರ (B Nagendra) ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಗುರುವಾರವೇ ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ರಾಜೀನಾಮೆಯನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಮುಂದುವರಿಯಬೇಕೇ ಎಂಬ ಗೊಂದಲದಲ್ಲಿ ಪಕ್ಷದ ವರಿಷ್ಠರು ಹಾಗೂ ನಾಯಕತ್ವವಿದ್ದು, ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನಾಗೇಂದ್ರ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ನಾಯಕತ್ವದ ಮುಂದಿಟ್ಟಿದ್ದು, ಸರ್ಕಾರಕ್ಕೆ ಮುಜುಗರವಾಗದಂತೆ ಹೆಜ್ಜೆಯಿಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಹಗರಣ, ಭ್ರಷ್ಟಾಚಾರ, ರಾಜಕೀಯ ಹಿನ್ನಡೆ – ಬಳ್ಳಾರಿ ಉಸ್ತುವಾರಿ ಸಚಿವರಾದರೆ ಸಂಕಷ್ಟ ಗ್ಯಾರಂಟಿನಾ?
ರಾಜೀನಾಮೆ ಅಂಗೀಕಾರದ ಕುರಿತು ಪಕ್ಷದ ಹೈಕಮಾಂಡ್ ಹಾಗೂ ನಾಯಕತ್ವದ ಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದ ನಂತರವೇ ಅಂತಿಮ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೆ.1 ರಿಂದ 10 ದಿನಗಳ ಕಾಲ ಬಳ್ಳಾರಿ ಚಲೋ ಪಾದಯಾತ್ರೆ (Ballari Chalo Padayatra) ಘೋಷಣೆ ಮಾಡಿದೆ. ಬಿಜೆಪಿ ಪಾದಯಾತ್ರೆಗೆ ಮುನ್ನವೇ ನಾಗೇಂದ್ರ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಮತ್ತು ಕಾಂಗ್ರೆಸ್ ಹೈಕಮಾಂಡ್ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
