Connect with us

Bengaluru City

ರಾಜ್ಯದಲ್ಲಿ ಮುಂದುವರಿದ ವರುಣನ ಆರ್ಭಟ- ಚರಂಡಿಯಲ್ಲಿ ಬಿದ್ದು ಓರ್ವ ಸಾವು

Published

on

– ದಾವಣಗೆರೆಯ ನಿಲ್ದಾಣ, ದೇವಸ್ಥಾನಗಳು ಜಲಾವೃತ

ಬೆಂಗಳೂರು: ಬೆಂಗಳೂರು, ಮೈಸೂರು, ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ದಾವಣಗೆರೆಯಲ್ಲಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣವು ಜಲಾವೃತಗೊಂಡಿದೆ.

ದಾವಣಗೆರೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆ ಅವಾಂತರವನ್ನೇ ಸೃಷ್ಠಿ ಮಾಡಿದೆ. ಭಾನುವಾರ ಸಂಜೆ 4 ಗಂಟೆಗೆ ಶುರುವಾದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಯಿತು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರುಪಾಲಾಗಿದ್ದು, ಕೆಲ ಕಡೆ ಮನೆಯ ಗೋಡೆಗಳು ಸಹ ಬಿದ್ದಿವೆ.

ಅಜಾದ್ ನಗರ ಬಾಷಾ ನಗರ, ಬೇತೂರು ರಸ್ತೆ, ಹಾಗೂ ಬೂದಾಳ್ ರಸ್ತೆ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಅಷ್ಟೇ ಅಲ್ಲದೇ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು ಕೆಲ ಕಾಲ ಬಸ್ ಸಂಚಾರ ಸ್ಥಗಿತವಾಗಿತ್ತು. ಇದರಿಂದಾಗಿ ಪ್ರಯಾಣಿಕರು ಮೇಜುಗಳ ಮೇಲೆ ನಿಂತು ತೊಂದರೆ ಅನುಭವಿಸುವಂತಾಯಿತು.

ಸಾವು:
ದಾವಣಗೆರೆಯಲ್ಲಿ ಧಾರಕಾರ ಸುರಿದ ಮಳೆಯಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದೇವರಾಜ್ ಅರಸ್ ಬಡಾವಣೆಯ ಚರಂಡಿಯಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಗಾಂಧಿನಗರ ಪೊಲೀಸರು ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸಂಜೆ ಅರ್ಧ ಗಂಟೆ ಎಡಬಿಡದೆ ಮಳೆ ಸುರಿದಿದೆ. ದಿಢೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರ ಪರದಾಡುವಂತಾಗಿತ್ತು.

ಮಳೆ ಕಡಿಮೆ ಆಗಿ ಪ್ರವಾಹ ಇಳಿದ ಬಳಿಕ ಪ್ರಳಯ ಸೃಷ್ಟಿಸಿದ ಅನಾಹುತಗಳ ಅನಾವರಣ ಹೆಚ್ಚಾಗುತ್ತಿದೆ. ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಕೊಚ್ಚಿಬಂದ ಗುಡ್ಡದ ರಾಶಿಯಿಂದ ಶಂಕರ್ ಮೃತದೇಹವನ್ನು ಹೊರತೆಗೆಯಲಾಗಿದ್ದು, ಇನ್ನುಳಿದ ಐವರಿಗಾಗಿ ಹುಡುಕಾಟ ನಡೆಯುತ್ತಿದೆ. ಇತ್ತ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾವನ ಅಂಗಡಿ ನೋಡಲು ಹೋಗಿ ಕೃಷ್ಣಾ ನದಿ ಪಾಲಾಗಿದ್ದ ಶಾಂತಿನಾಥ್ ಸಮಾಜ್ ಮತ್ತು ಲಕ್ಷ್ಮಣ ಸಮಾಜ್‍ರ ಮೃತದೇಹ ಪತ್ತೆಯಾಗಿದೆ. ಗದಗದ ಬೂದಿಹಾಳದಲ್ಲಿ ಮಳೆಗೆ ಕುಸಿದ ಮನೆಯನ್ನು ನೋಡಿ ಹಣಮವ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಅನಾರೋಗ್ಯ ಪೀಡಿತ ವೃದ್ಧೆಯನ್ನು 1.5 ಕಿಮೀ ಕಂಬಳಿಯಲ್ಲಿ ಹೊತ್ತುತಂದು ಆಸ್ಪತ್ರೆಗೆ ದಾಖಲಿಸಲಾಯಿತು. ಭೂಕುಸಿತಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಗೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಿದರು. ಬಾಗಲಕೋಟೆಯ ಚಿಕ್ಕಪಡಸಲಗಿಯಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಅಥಣಿಯ ದರೂರು-ಹಲ್ಯಾಳ ಸೇತುವೆ ಬಿರುಕು ಬಿಟ್ಟಿದ್ದರಿಂದ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹೊಳೆನರಸೀಪುರ ತಾಲೂಕಿನ ಸೋಮನ ಹಳ್ಳಿಯಲ್ಲಿ ಹೇಮಾವತಿ ಜಲಾಶಯದ ಕಾಲುವೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿದೆ.

ದಕ್ಷಿಣ ಭಾರತವನ್ನು ಕಾಡಿದ್ದ ಪ್ರವಾಹ ಈಗ ಉತ್ತರ ಭಾರತವನ್ನೇ ಮುಳುಗಿಸುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್, ಕೊಲ್ಕತ್ತಾದಲ್ಲಿ ಭಾರೀ ಮಳೆ ಆಗುತ್ತದೆ. ವರುಣನ ಅವಾಂತರಕ್ಕೆ ಹಿಮಾಚಲ ಪ್ರದೇಶದಲ್ಲಿ 18 ಮಂದಿ ಮೃತಪಟ್ಟಿದ್ದು, ಹೆದ್ದಾರಿ ಮೇಲೆ ಗುಡ್ಡ ಕುಸಿದಿದೆ. ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಬಿಯಾಸ್ ನದಿ ದಡದಲ್ಲಿ ಹಳೆಯ ಶಾಲಾ ಕಟ್ಟಡ ಕುಸಿದಿದೆ. ಉತ್ತರಕಾಶಿಯಲ್ಲಿ ವಾಹನವೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಪಂಜಾಬ್‍ನಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ.

Click to comment

Leave a Reply

Your email address will not be published. Required fields are marked *